ಇಸ್ಲಮಾಬಾದ್, ಮಾ. 31 (DaijiworldNews/DB): ಪಾಕಿಸ್ತಾನದ ಭದ್ರತಾ ವಿಚಾರಗಳ ಕುರಿತು ಚರ್ಚೆ ನಡೆಸುವ ಸಲುವಾಗಿ ಪ್ರಧಾನಿ ಇಮ್ರಾನ್ ಖಾನ್ ಅವರು ಗುರುವಾರ ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ಕರೆದಿದ್ದಾರೆ.
ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಗುರುವಾರ ಆರಂಭವಾಗಿದೆ. ಇಮ್ರಾನ್ ನಿವಾಸದಲ್ಲೇ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ಸೇನಾ ಪಡೆಗಳ ಮುಖ್ಯಸ್ಥರು, ಪ್ರಮುಖ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರ, ಗುಪ್ತಚರ ಇಲಾಖೆಯ ಅಧಿಕಾರಿಗಳು ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ಸಚಿವ ಫವಾದ್ ಚೌಧರಿ ಟ್ವೀಟ್ ಮಾಡಿದ್ದಾರೆ ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇಮ್ರಾನ್ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆರಂಭಕ್ಕೂ ಮುನ್ನವೇ ಈ ಸಭೆ ಕರೆದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ವಿದೇಶಿ ಪಿತೂರಿ ತಮ್ಮನ್ನು ಹುದ್ದೆಯಿಂದ ಇಳಿಸಲು ಕೆಲಸ ಮಾಡುತ್ತಿದೆ ಎಂದೂ ಅವರು ಈ ಹಿಂದೆ ಆರೋಪಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಭೆ ಕರೆದಿದ್ದಾರೆ.