ಕೊಲಂಬೋ, ಏ 01 (DaijiworldNews/DB): ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ರೋಸಿ ಹೋದ ಲಂಕಾ ಜನರು ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ನಿವಾಸದ ಮುಂಭಾಗ ಪ್ರತಿಭಟನೆ ನಡೆಸಿದ್ದು, ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಒಟ್ಟು 45 ಮಂದಿಯನ್ನು ಕೊಲಂಬೋ ಪೊಲೀಸರು ಬಂಧಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಹಿಂಸಾತ್ಮಕ ಮಟ್ಟಕ್ಕೆ ತಲುಪಿದ್ದ ಕಾರಣ 5 ಮಂದಿ ಪೊಲೀಸರು ಗಾಯಗೊಂಡಿದ್ದರು. ಅನೇಕ ಸರ್ಕಾರಿ ವಾಹನಗಳಿಗೆ ಬೆಂಕ ಹಚ್ಚಲಾಗಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ಘಟನೆಗೆ ಕಾರಣವಾದ 45 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಕೊಲಂಬೋದ ವಿವಿಧೆಡೆ ರಾತ್ರಿ ಕರ್ಫ್ಯೂ ಹೇರಲಾಗಿತ್ತು. ಕೊಲಂಬೊ ಉತ್ತರ, ದಕ್ಷಿಣ, ಕೊಲಂಬೊ ಸೆಂಟ್ರಲ್, ನುಗೆಗೋಡ, ಮೌಂಟ್ ಲ್ಯಾವಿನಿಯಾ ಮತ್ತು ಕೆಲನಿಯಾ ಪೊಲೀಸ್ ವಿಭಾಗಗಳಲ್ಲಿ ಕರ್ಫ್ಯೂ ಜಾರಿಯಲ್ಲಿತ್ತು. ಇದೀಗ ಪರಿಸ್ಥಿತಿ ತಿಳಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 5 ಗಂಟೆ ವೇಳೆಗೆ ಕರ್ಫ್ಯೂ ತೆರುವುಗೊಳಿಸಲಾಗಿದೆ. ಆದರೆ ಗುರುವಾರದಂದು ರಾಜಧಾನಿ ಕೊಲಂಬೋದಲ್ಲಿರುವ ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ದೇಶವು ಸ್ವಾತಂತ್ರ್ಯ ಪಡೆದ ನಂತರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವುದು ಇದೇ ಮೊದಲು. ಕಳೆದ ಕೆಲವು ವಾರಗಳಿಂದ ಆಹಾರ, ಅಗತ್ಯ ವಸ್ತುಗಳು, ಇಂಧನ, ಅನಿಲ ಸೇರಿದಂತೆ ಮೂಲಭೂತ ಅಗತ್ಯಗಳ ಕೊರತೆಯನ್ನು ಜನ ಎದುರಿಸುತ್ತಿದ್ದಾರೆ. ರಾಜಪಕ್ಸೆ ಅವರು ಅಧ್ಯಕ್ಷ ಸ್ಥಾನ ಬಿಟ್ಟು ಮನೆಗೆ ತೆರಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಎಂದು ಜನರು ಹೇಳಿದ್ದಾರೆ.