ವಾಷಿಂಗ್ಟನ್, ಏ 01 (DaijiworldNews/MS): ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ದೆಹಲಿಗೆ ಬಂದಿಳಿಯುತ್ತಿದ್ದಂತೆ, ಅಮೆರಿಕ ಅಸಮಾಧಾನ ವ್ಯಕ್ತಪಡಿಸಿದ್ದು, "ಚೀನಾ ಮೇಲೆ ರಷ್ಯಾ ಹೆಚ್ಚಿನ ಅವಲಂಬನೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಗಡಿ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ವಿಚಾರದಲ್ಲಿ ಭಾರತದ ರಕ್ಷಣೆಗೆ ರಷ್ಯಾ ಬರಲಾರದು. ಭಾರತದ ಒಳಗೆ ಚೀನಾ ನುಸುಳುವ, ದಾಳಿ ಮಾಡುವ ಸನ್ನಿವೇಶ ಬಂದಾಗ ದೇಶದ ನೆರವಿಗೆ ಧಾವಿಸುವ ಸ್ಥಿತಿಯಲ್ಲಿ ರಷ್ಯಾ ಇಲ್ಲ" ಎಂದು ಭಾರತಕ್ಕೆ ಎಚ್ಚರಿಕೆಯ ಮಾತುಗಳನ್ನಾಡಿದೆ.
ಒಂದೆಡೆ ಉಕ್ರೇನ್ ವಿಚಾರವಾಗಿ ರಷ್ಯಾ ವಿರುದ್ಧ ಕಿಡಿಕಾರುತ್ತಿರುವ ಅಮೆರಿಕ, ರಷ್ಯಾ ವಿರುದ್ಧ ನಿರ್ಬಂಧಕ್ಕೆ ಜಾಗತಿಕ ಬೆಂಬಲ ಪಡೆಯಲು ಹರಸಾಹಸ ಪಡುತ್ತಿದೆ. "ಸೂಕ್ತವಾದ ಬಣದಲ್ಲಿ ಗುರುತಿಸಿಕೊಳ್ಳುವ ಸರಿಯಾದ ಕಾಲ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಇತರೆ ಅನೇಕ ದೇಶಗಳೊಂದಿಗೆ ನಿಲ್ಲುವ ಸಮಯ, ಉಕ್ರೇನಿಯನ್ ಜನರೊಂದಿಗೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಾರ್ವಭೌಮತ್ವಕ್ಕಾಗಿ ನಿಲ್ಲುವುದು, ಮತ್ತು ಅಧ್ಯಕ್ಷ ಪುಟಿನ್ ಅವರ ಯುದ್ಧಕ್ಕೆ ಧನಸಹಾಯ ಮತ್ತು ಇಂಧನ ಮತ್ತು ಸಹಾಯ ಮಾಡಬಾರದು. ," ಎಂದು ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೊ ಬುಧವಾರ ವಾಷಿಂಗ್ಟನ್ನಲ್ಲಿ ಹೇಳಿದ್ದಾರೆ
ಇನ್ನೊಂದೆಡೆ ಅಮೆರಿಕದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ , ರಷ್ಯಾ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಮೀರಲು ಯಾವುದೇ ದೇಶ ಮುಂದಾದರೂ ಅದಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸಲು ಮುಂದಾಗುತ್ತಿರುವ ಭಾರತಕ್ಕೆ ಅಮೆರಿಕ ಯಾವುದೇ ಲಕ್ಷ್ಮಣ ರೇಖೆ ಹಾಕುತ್ತಿಲ್ಲ. ಏಕೆಂದರೆ ಇಂಧನ ಆಮದುಗಳಿಗೆ ಅಮೆರಿಕದ ನಿರ್ಬಂಧಗಳು ವಿನಾಯಿತಿ ನೀಡಿರುವುದರಿಂದ ಈಗಿನ ಇಂಧನ ಆಮದು ಚಟುವಟಿಕೆಯು ಅದನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂದು ಹೇಳಿದ್ದಾರೆ.