ಇಸ್ಲಾಮಾಬಾದ್, ಏ 01 (DaijiworldNews/DB): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹತ್ಯೆಗೆ ಸಂಚು ನಡೆಸಲಾಗಿದೆ ಎಂದು ಪಾಕಿಸ್ತಾನದ ಭದ್ರತಾ ಸಂಸ್ಥೆಗಳು ತಿಳಿಸಿರುವುದಾಗಿ ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಶುಕ್ರವಾರ ಹೇಳಿದ್ದಾರೆ.
ಪಾಕಿಸ್ತಾನ ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಚರ್ಚೆ ಈಗಾಗಲೇ ಪಾಕ್ ಸಂಸತ್ತಿನಲ್ಲಿ ಆರಂಭವಾಗಿದೆ. ಆದರೆ ಅದಕ್ಕೂ ಮುನ್ನ ಅವರ ಹತ್ಯೆಗೆ ಸಂಚು ನಡೆಸುತ್ತಿರುವುದು ಗೊತ್ತಾಗಿದೆ ಎಂದು ಪಾಕ್ ಭದ್ರತಾ ಸಂಸ್ಥೆಗಳು ತಿಳಿಸಿವೆ. ಇದೀಗ ಇಂತಹ ಬೆದರಿಕೆಗಳ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ ಎಂಬುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಈಗಾಗಲೇ ಪಾಕ್ ಪ್ರಧಾನಿ ಹತ್ಯೆಗೆ ಸಂಚು ರೂಪಿಸುತ್ತಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಾರ್ವಜನಿಕ ಸಮಾರಂಭಗಳಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ಬಳಸುವಂತೆ ಸೂಚಿಸಲಾಗಿತ್ತು. ಆದರೆ ಇದಕ್ಕೆ ಇಮ್ರಾನ್ ಖಾನ್ ಒಪ್ಪಲಿಲ್ಲ. ಸಾವು ಬರಬೇಕಾದ ಸಮಯದಲ್ಲಿ ಬರುತ್ತದೆ ಎಂದು ಅವರು ಬುಲೆಟ್ ಪ್ರೂಫ್ ಶೀಲ್ಡ್ ಬಳಸಲು ನಿರಾಕರಿಸಿದ್ದರು ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ನಾಯಕ ಫೈಸಲ್ ವಾವ್ಡಾ ಹೇಳಿದ್ದರು.
ಇತ್ತೀಚೆಗಷ್ಟೇ ತಮ್ಮನ್ನು ಹುದ್ದೆಯಿಂದ ಕೆಳಗಿಳಿಸಲು ವಿದೇಶಿ ಪಿತೂರಿ ನಡೆಯುತ್ತಿದೆ ಎಂಬುದಾಗಿ ಸಾರ್ವಜನಿಕವಾಗಿ ಸಮಾರಂಭವೊಂದರಲ್ಲಿ ಇಮ್ರಾನ್ ಖಾನ್ ಹೇಳಿದ್ದರು.