ಕೊಲೊಂಬೊ, ಏ 02 (DaijiworldNews/MS): ಹಿಂದೆಂದೂ ಕಂಡಿರದಂತಹ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಜನರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬೆಳವಣಿಗೆಗಳ ಬೆನ್ನಲ್ಲೇ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಪ್ರಕ್ಷುಬ್ಧಗೊಂಡ ನೂರಾರು ಜನರು ಕೋಪದಿಂದ ಅವರ ಮನೆಗೆ ನುಗ್ಗಲು ಪ್ರಯತ್ನಿಸಿದ ಒಂದು ದಿನದ ನಂತರ ಭದ್ರತಾ ಪಡೆಗಳಿಗೆ ವ್ಯಾಪಕ ಅಧಿಕಾರವನ್ನು ನೀಡಿದ್ದಾರೆ.
"ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆ ಮತ್ತು ಸಮುದಾಯದ ಜೀವನಕ್ಕೆ ಅಗತ್ಯವಾದ ಸರಬರಾಜು ಮತ್ತು ಸೇವೆಗಳ ನಿರ್ವಹಣೆಗಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಕಠಿಣ ಕಾನೂನುಗಳನ್ನು ಜಾರಿ ಮಾಡ ಬೇಕಾಗಿದೆ. ಶಂಕಿತರನ್ನು ಬಂಧಿಸಲು, ವಶಕ್ಕೆ ತೆಗೆದುಕೊಳ್ಳಲು ಭದ್ರತಾ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ" ಎಂದು ರಾಜಪಕ್ಸ ಹೇಳಿದ್ದಾರೆ.
ಇನ್ನು ರಾಜಧಾನಿ ಕೊಲೊಂಬೊದಲ್ಲಿ ಗುರುವಾರ ತಡರಾತ್ರಿಯಿಂದಲೇ ಅನ್ವಯವಾಗುವಂತೆ ಕರ್ಪ್ಯೂ ವಿಧಿಸಲಾಗಿದೆ.