ವಾಷಿಂಗ್ಟನ್, ಏ 02 (DaijiworldNews/DB): ಅಮೆರಿಕಾ ಸರ್ಕಾರದಲ್ಲಿ ಭಾರತೀಯ ಮೂಲದ ಕಲ್ಪನಾ ಕೋಟಗಲ್ ಮತ್ತು ವಿನಯ್ ಸಿಂಗ್ ಅವರನ್ನು ಉನ್ನತ ಆಡಳಿತಾತ್ಮಕ ಹುದ್ದೆಗಳಿಗೆ ನಾಮನಿರ್ದೇಶನ ಮಾಡಲಾಗಿದೆ. ಆ ಮೂಲಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಸರ್ಕಾರದಲ್ಲಿ ಅಧಿಕಾರಿಗಳಾಗಿರುವ ಭಾರತೀಯರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ಈ ನೇಮಕದ ಕುರಿತಂತೆ ಶುಕ್ರವಾರ ಶ್ವೇತಭವನವು ಮಾಹಿತಿ ಹೊರಡಿಸಿದೆ. ನಾಗರಿಕ ಹಕ್ಕುಗಳ ವಕೀಲೆಯಾಗಿರುವ ಕಲ್ಪನಾ ಕೊಟಗಲ್ ಅವರನ್ನು ಸಮಾನ ಉದ್ಯೋಗ ಅವಕಾಶ ಆಯೋಗದ ಆಯುಕ್ತರನ್ನಾಗಿ ಹಾಗೂ ಪ್ರಮಾಣೀಕೃತ ಸಾರ್ವಜನಿಕ ಅಕೌಂಟೆಂಟ್ ಆಗಿರುವ ವಿನಯ್ ಸಿಂಗ್ ಅವರನ್ನು ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಗೆ ಮುಖ್ಯ ಹಣಕಾಸು ಅಧಿಕಾರಿಯಾಗಿ ನಾಮನಿರ್ದೇಶನ ಮಾಡಿರುವುದಾಗಿ ಜೋ ಬೈಡನ್ ಸರ್ಕಾರದ ಅಧಿಕೃತ ಮೂಲಗಳು ಹೇಳಿವೆ.
ಈಗಾಗಲೇ ಜೋ ಬೈಡನ್ ಸರ್ಕಾರದಲ್ಲಿ ಭಾರತೀಯ ಮೂಲದ 20 ಮಂದಿ ವಿವಿಧ ಉನ್ನತ ಸ್ತರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನೀರಾ ಟಂಡನ್, ಮಾಲಾ ಅಡಿಗ, ಡಾ. ವಿವೇಕ್ ಮೂರ್ತಿ, ವನಿತಾ ಗುಪ್ತಾ, ಭರತ್ ರಾಮಮೂರ್ತಿ, ಗೌತಮ್ ರಾಘವನ್, ಗರಿಮಾ ವರ್ಮಾ, ತರುಣ್ ಛಾಬ್ರಾ, ಶಾಂತಿ ಕಲಾಟಿಲ್, ವಿದುರ್ ಶರ್ಮಾ, ಸೋನಿಯಾ ಅಗರ್ವಾಲ್, ವಿನಯ್ ರೆಡ್ಡಿ, ಸಬ್ರಿನಾ ಸಿಂಗ್, ಆಯೇಶಾ ಶಾ, ಸುಮೋನಾ ಗುಹಾ, ವೇದಾಂತ ಪಟೇಲ್, ಸಮೀರಾ ಫಾಜಿಲಿ, ನೇಹಾ ಗುಪ್ತಾ ಮುಂತಾದವರು ಜೋ ಬೈಡನ್ ಸರ್ಕಾರದಲ್ಲಿ ವಿವಿಧ ಹುದ್ದೆಗಳ ಜವಾಬ್ದಾರಿಯನ್ನು ಹೊತ್ತಿದ್ದಾರೆ.