ಅಫ್ಘಾನಿಸ್ತಾನ, ಏ 02 (DaijiworldNews/DB): ಅಫ್ಘಾನಿಸ್ತಾನದ ಪಶ್ಚಿಮ ಪ್ರಾಂತ್ಯದ ಹೆರಾತ್ನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 25 ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಹೆರಾತ್ ನಗರದ ಪಿಡಿ 12 ನಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಘಟನೆ ನಡೆದ ದಿನದಂದು ಏಳು ಮಂದಿ ಸಾವನ್ನಪ್ಪಿದ್ದರು. ಶನಿವಾರ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ಪ್ರಾಂತೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ ಎಂಬುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಸ್ಪೋಟಕಗಳನ್ನು ಆಟದ ಮೈದಾನದಲ್ಲಿ ಹೂತಿಡಲಾಗಿದ್ದು, ಯುವಕರು ಆಟವಾಡುತ್ತಿದ್ದ ವೇಳೆ ಇದು ಸ್ಪೋಟಗೊಂಡಿದೆ ಎನ್ನಲಾಗಿದೆ. ಸ್ಪೋಟದ ಹೊಣೆಯನ್ನು ಯಾವುದೇ ಸಂಘಟನೆಗಳು ಈವರೆಗೆ ಹೊತ್ತುಕೊಂಡಿಲ್ಲ.
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಇಲ್ಲಿ ಹಲವಾರು ದಾಳಿಗಳು ನಡೆದಿವೆ. ಹೆರಾತ್ ನಗರದಲ್ಲಿ ಕಳೆದ ಜನವರಿಯಲ್ಲಿ ಘಟಿಸಿದ ಸ್ಫೋಟದಲ್ಲಿ ಏಳು ಮಂದಿ ಮೃತಪಟ್ಟಿದ್ದರು.