ಇಸ್ಲಾಮಾಬಾದ್, ಏ 03 (DaijiworldNews/DB): ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಭಾನುವಾರ ಮತದಾನ ನಡೆಯಲಿದ್ದು, ಇಮ್ರಾನ್ ಸರ್ಕಾರದ ಭವಿಷ್ಯ ನಿರ್ಣಯವಾಗಲಿದೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮತದಾನ ನಡೆಯಲಿದ್ದು, ಆಡಳಿತಾರೂಢ ಪಾಕಿಸ್ತಾನ್ ತೆಹ್ರಿಕ್ -ಇ-ಇನ್ಸಾಫ್ ಸರ್ಕಾರ ಉಳಿಯುತ್ತಾ ಅಥವಾ ಆಡಳಿತದಿಂದ ಕೆಳಗಿಳಿಯುತ್ತದೆಯೋ ಎಂಬುದು ತಿಳಿಯಲಿದೆ. ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಸಲ್ಲಿಸಿದ ಸುಮಾರು ಒಂದು ತಿಂಗಳ ನಂತರ ಮತದಾನ ನಡೆಯುತ್ತಿದೆ.
342 ಸಂಖ್ಯಾ ಬಲವನ್ನು ಹೊಂದಿರುವ ಪಾಕ್ ಸಂಸತ್ತಿನಲ್ಲಿ ಬಹುಮತಕ್ಕೆ 172 ಮತಗಳು ಬೇಕು. ಆದರೆ ಇಮ್ರಾನ್ ಸಕಾರದಲ್ಲಿ ಜೊತೆಗೂಡಿದ್ದ ಮಿತ್ರಪಕ್ಷಗಳೂ ಅವರನ್ನು ತೊರೆದಿರುವುದರಿಂದ ಇಮ್ರಾನ್ ಖುರ್ಚಿ ಉಳಿಯುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನಲಾಗಿದೆ.
ಈ ನಡುವೆ ಪ್ರತಿಪಕ್ಷ ಶಾಸಕರು ಸಂಸತ್ತಿಗೆ ಆಗಮಿಸದಂತೆ ತಡೆಯಲು ಪಾಕಿಸ್ತಾನ್ ತೆಹ್ರಿಕ್ -ಇ-ಇನ್ಸಾಫ್ ಪಕ್ಷದ ಪ್ರಮುಖರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮ್ಮ ಪರವಾಗಿ ಬೀದಿಗಿಳಿದು ಶಾಂತಿಯುತವಾಗಿ ಯುವಕರು ಪ್ರತಿಭಟಿಸಬೇಕು ಎಂದು ಇಮ್ರಾನ್ ಖಾನ್ ಮನವಿ ಮಾಡಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.