ಇಸ್ಲಮಾಬಾದ್, ಏ 03 (DaijiworldNews/DB): ಪಾಕಿಸ್ಥಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಉಪ ಸಭಾಪತಿ ಭಾನುವಾರ ವಜಾಗೊಳಿಸಿದ್ದಾರೆ. ಆ ಮೂಲಕ ಇಮ್ರಾನ್ ಖಾನ್ ಕುರ್ಚಿ ತಾತ್ಕಾಲಿಕವಾಗಿ ಗಟ್ಟಿಯಾಗಿದೆ.
ಭದ್ರತಾ ಬೆದರಿಕೆಯನ್ನು ಉಲ್ಲೇಖಿಸಿ ಈ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಲಾಗಿದೆ. ಅಲ್ಲದೇ ಕಲಾಪವನ್ನು ಏಪ್ರಿಲ್ 25ರವರೆಗೆ ಮುಂದೂಡಿ ಉಪ ಸಭಾಪತಿಗಳು ಆದೇಶಿಸಿದ್ದಾರೆ.
ರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರ ಹೆಚ್ಚಳವಾಗುವುದಕ್ಕೆ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷವೇ ಕಾರಣ ಎಂದು ಆರೋಪಿಸಿ ಮಾರ್ಚ್ 8ರಂದು ರಾಷ್ಟ್ರೀಯ ಅಸೆಂಬ್ಲಿಯ ಸೆಕ್ರೆಟರಿಯೇಟ್ ಗೆ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಸಲ್ಲಿಕೆ ಮಾಡಿದ್ದವು.
ಬಳಿಕ ನಿರ್ಣಯ ಮಂಡನೆ ಮುಂದೂಲ್ಪಟ್ಟು ಇಂದಿಗೆ ನಿಗದಿಯಾಗಿತ್ತು. ಇದೀಗ ಮತ್ತೆ ಕಲಾಪ ಮುಂದೂಡಲ್ಪಟ್ಟಿರುವುದರಿಂದ ಇಮ್ರಾನ್ ಖಾನ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಪಾಕ್ ಪ್ರಧಾನಿಯವರು ತಮ್ಮ ವಿರುದ್ದ ವಿದೇಶಿ ಪಿತೂರಿ ಕೆಲಸ ಮಾಡುತ್ತಿದೆ ಎಂದು ಈ ಹಿಂದೆ ಆರೋಪಿಸಿದ್ದರು.