ಕೊಲಂಬೊ, ಏ 04 (DaijiworldNews/MS): ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸೆ ಹೊರತುಪಡಿಸಿ ಕ್ಯಾಬಿನೆಟ್ ಮಂತ್ರಿಗಳು, ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ರಾಜಪಕ್ಸೆ ಅವರ ಪುತ್ರ ನಮಲ್ ರಾಜಪಕ್ಸ ಕೂಡ ಸೇರಿದ್ದಾರೆ. ಇವರು ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸಚಿವ ಸಂಪುಟದಲ್ಲಿದ್ದ ಎಲ್ಲ 26 ಸಚಿವರೂ ಒಮ್ಮೆಲೆ ರಾಜೀನಾಮೆ ಕೊಟ್ಟಿದ್ದು, ಸಧ್ಯ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟೂ ಸೃಷ್ಟಿಯಾಗಿದೆ. ರಾಜೀನಾಮೆಗಳನ್ನು ಪ್ರಧಾನಿ ಅಂಗೀಕರಿಸುತ್ತಾರೆಯೇ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ.
ಶ್ರೀಲಂಕಾದಲ್ಲಿ ದಿನಕ್ಕೆ ಸರಾಸರಿ 13 ಗಂಟೆಗಳ ಲೋಡ್ಶೆಡಿಂಗ್ ಇದ್ದು ಇದರ ಜೊತೆಗೆ ಇಂಧನ ಕೊರತೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಜೀವನ ಸಂಕಷ್ಟ ಅನುಭವಿಸುತ್ತಿದ್ದು, ಜನರು ದಿನದಿಂದ ದಿನಕ್ಕೆ ಸಹನೆ ಕಳೆದುಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಸಚಿವ ಸಂಪುಟದ ಎಲ್ಲ ಮಂತ್ರಿಗಳೂ ಸಾಮೂಹಿಕ ರಾಜೀನಾಮೆ ನೀಡಿರುವುದರಿಂದ ಹೊಸದಾಗಿ ಮಂತ್ರಿಮಂಡಲ ರಚಿಸಲು ಪ್ರಧಾನಿಗೆ ಅವಕಾಶ ಸಿಕ್ಕಿದ್ದು. ಆದರೆ ಪ್ರಧಾನಿಯ ಮುಂದಿನ ನಿರ್ಧಾರದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.