ಕೀವ್, ಏ 04 (DaijiworldNews/DB): ಉಕ್ರೇನ್ ನಲ್ಲಿ ರಷ್ಯಾ ನರಮೇಧ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೆಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ ನ ಪಟ್ಟಣಗಳಲ್ಲಿ ರಷ್ಯಾ ಸೇನೆಯನ್ನು ಹಿಂಪಡೆದುಕೊಂಡಿದೆ. ಆದರೆ ಬುಕಾದಲ್ಲಿ ನಾಗರಿಕರ ಸಾವು ನಡೆದಿದೆ. ಇದು ರಷ್ಯಾ ನಡೆಸಿರುವ ನರಮೇಧದ ಸ್ಪಷ್ಟ ಚಿತ್ರಣವಾಗಿದೆ ಎಂದವರು ಹೇಳಿದ್ದಾರೆ. ರಷ್ಯಾದ ವಶವಾಗಲು, ಅವರು ಹೇಳಿದಂತೆ ಕೇಳಿಕೊಂಡಿರಲು ನಾವು ಉಕ್ರೇನಿಯನ್ನರು ಬಯಸುವುದಿಲ್ಲ. ಆ ದೇಶವು ಇಡೀ ಉಕ್ರೇನ್ ನ್ನು ಮತ್ತು ಇಲ್ಲಿನ ಜನರನ್ನು ನಾಶಪಡಿಸಲು ನೋಡುತ್ತಿದೆ ಎಂದವರು ಆಪಾದಿಸಿದ್ದಾರೆ.
ಕೈಗಳನ್ನು ಹಿಂದಕ್ಕೆ ಕಟ್ಟಿ ಕ್ರೂರವಾಗಿ ಗುಂಡಿಕ್ಕಿ ನರಮೇಧ ನಡೆಸಲಾಗಿದೆ. ಆದರೆ ಕಾನೂನಿನಲ್ಲಿ ಇಂತಹ ಕ್ರೂರತೆಗೆ ಯಾವ ಶಿಕ್ಷೆ ಇದೆ ಎಂಬುದೇ ನನಗೆ ತಿಳಿದಿಲ್ಲ. ರಷ್ಯಾವು ಗಡಿಗಳಿಂದ ಎಲ್ಲಾ ಪಡೆಗಳನ್ನು ಹಿಂತೆಗೆಯಬೇಕು. ಇದು ಮಾತುಕತೆಗೆ ಸುಲಭವಾಗುತ್ತದೆ ಎಂದು ಅವರು ಆಗ್ರಹಿಸಿದ್ದಾರೆ.
ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ರಷ್ಯಾದ ರಕ್ಷಣಾ ಸಚಿವಾಲಯವ, ಇದು ಜನರನ್ನು ಪ್ರಚೋದಿಸುವ ನಿಟ್ಟಿನಲ್ಲಿ ಉಕ್ರೇನ್ ಮಾಡಿದ ಕುತಂತ್ರವಾಗಿದೆ ಎಂದು ಹೇಳಿದೆ.
ಈ ನಡುವೆ ಝೆಲೆನ್ಸ್ಕಿ ಆರೋಪಕ್ಕೆ ದನಿಗೂಡಿಸಿರುವ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್, ಬುಕಾದಲ್ಲಿ ರಷ್ಯಾ ನಡೆಸಿದ ಮಾನವಹತ್ಯೆಗಳ ಚಿತ್ರಗಳನ್ನು ನೋಡಿದರೆ ಕರುಳು ಕಿವುಚಿದಂತಾಗುತ್ತದೆ ಎಂದಿದ್ದಾರೆ.
ಯುರೋಪ್ ನಲ್ಲಿ ದಶಕಗಳಿಂದ ಕಾಣದ ಕ್ರೂರತೆಯನ್ನು ರಷ್ಯಾವು ಬುಕಾದಲ್ಲಿ ಎಸಗಿದೆ ಎಂದು ನ್ಯಾಟೋ ಸೆಕ್ರೆಟರಿ ಜನರಲ್ ಜೆನ್ಸ್ ಸ್ಟೋಲ್ಟೆನ್ ಬರ್ಗ್ ಬರೆದುಕೊಂಡಿದ್ದಾರೆ.