ಕೊಲಂಬೋ, ಏ 05 (DaijiworldNews/DB): ಅಧಿಕಾರ ವಹಿಸಿಕೊಂಡ 24 ಗಂಟೆಗಳ ಒಳಗೆ ಶ್ರೀಲಂಕಾದ ನೂತನ ಹಣಕಾಸು ಸಚಿವ ಅಲಿ ಸಬ್ರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಅವರು ಕಳೆದೊಂದು ದಿನದ ಹಿಂದೆ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಹಣಕಾಸು ಸಚಿವರಾಗಿದ್ದ ಬಸಿಲ್ ರಾಜಪಕ್ಸೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಮಾಜಿ ನ್ಯಾಯಾಂಗ ಸಚಿವ ಅಲಿ ಸಬ್ರಿ ನೇಮಕವಾಗಿದ್ದರು.
ಶ್ರೀಲಂಕಾದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ದಿನಬಳಕೆಯ ವಸ್ತುಗಳಿಗೂ ಜನ ಹಾಹಾಕಾರ ಎದುರಿಸುವಂತಾಗಿದೆ. ಆರ್ಥಿಕ ಬಿಕ್ಕಟ್ಟು ಉಂಟಾಗಲು ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರ ನೀತಿಗಳೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆಗಿಳಿದ ಪರಿಣಾಮ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯನ್ನೂ ಘೋಷಿಸಲಾಗಿತ್ತು. ಈ ನಡುವೆ ಅಧ್ಯಕ್ಷ ರಾಜಪಕ್ಸೆ ಸಹೋದರ ಬಸಿಲ್ ರಾಜಪಕ್ಸೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಂತರ ಅಲಿ ಹೆಬ್ರಿ ನೇಮಕವಾಗಿತ್ತು.