ಕೊಲಂಬೊ, ಏ 06 (DaijiworldNews/DB): ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನ ದಂಗೆ ಎದ್ದ ಪರಿಣಾಮ ಶ್ರೀಲಂಕಾದಲ್ಲಿ ವಿಧಿಸಲಾಗಿದ್ದ ತುರ್ತು ಪರಿಸ್ಥಿತಿ ನಿಯಮವನ್ನು ಸದ್ಯ ಹಿಂತೆಗೆದುಕೊಳ್ಳಲಾಗಿದೆ.
ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ತುರ್ತು ಪರಿಸ್ಥಿತಿ ನಿಯಮ ಹಿಂಪಡೆದು ಆದೇಶ ಹೊರಡಿಸಿದ್ದಾರೆ. ಆದರೆ ತುರ್ತು ಪರಿಸ್ಥಿತಿ ಹಿಂಪಡೆದಿರುವುದರಿಂದ ಶ್ರೀಲಂಕಾಕ್ಕೆ ಅವಶ್ಯವಾಗಿ ಬೇಕಾಗಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಣಕಾಸು ಪರಿಹಾರ ಪ್ಯಾಕೇಜಿಗೆ ಒಪ್ಪಿಗೆ ಸೂಚನಾ ಪ್ರಕ್ರಿಯೆಯ ಹಾದಿ ಇನ್ನಷ್ಟು ಜಟಿಲಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ವರದಿಗಳು ಹೇಳಿವೆ.
ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾದಂತೆ ಜನ ಮೂಲಭೂತ ಅಗತ್ಯಗಳಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ, ಈ ಸ್ಥಿತಿಗೆ ಅಧ್ಯಕ್ಷ ರಾಜಪಕ್ಸೆ ಅವರೇ ಕಾರಣ ಎಂದು ಆರೋಪಿಸಿ ಜನ ರೊಚ್ಚಿಗೆದ್ದು ಪ್ರತಿಭಟನೆಗಿಳಿದಿದ್ದರು. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಆ ಮೂಲಕ ಪ್ರತಿಭಟನಾಕಾರರನ್ನು ಬಂಧಿಸುವ, ಆಸ್ತಿ ಮುಟ್ಟುಗೋಲು ಹಾಕುವ ಅಧಿಕಾರ ಅಧ್ಯಕ್ಷರಿಗೆ ಸಿಕ್ಕಿತ್ತು.
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ನಡುವೆ ರಾಜಕೀಯ ಚಟುವಟಿಕೆಗಳಲ್ಲಿಯೂ ಬದಲಾವಣೆ ಕಾಣುತ್ತಿದೆ. ಆಡಳಿತ ಮೈತ್ರಿಕೂಟದ ಹನ್ನೊಂದು ಪಕ್ಷಗಳ ಸಂಸದರು ತಾವು ಸ್ವತಂತ್ರರಾಗಿ ಕಾರ್ಯ ನಿರ್ವಹಿಸುವುದಾಗಿ ಮಂಗಳವಾರ ಸಂಸತ್ತಿನಲ್ಲಿ ಹೇಳಿದ್ದಾರೆ. ರಾಜಪಕ್ಸೆ ಅವರ ಪಕ್ಷದ ಸಂಸದರು ಕೂಡಾ ಅಧ್ಯಕ್ಷರಿಂದ ಅಂತರ ಕಾಯ್ದುಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಅಲ್ಲದೆ ಸಂಪುಟದ ಹಲವು ಸಚಿವರು ಈಗಾಗಲೇ ರಾಜೀನಾಮೆ ನೀಡಿರುವುದರಿಂದ ಲಂಕಾ ಸರ್ಕಾರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.