ಇಸ್ಲಾಮಾಬಾದ್, ಏ.07 (DaijiworldNews/SM): ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಮತ್ತೆ ಹಿನ್ನಡೆಯಾಗಿದೆ. ಪಾಕಿಸ್ತಾನ ಸುಪ್ರೀಂಕೋರ್ಟ್ ಈ ಬಗ್ಗೆ ಆದೇಶ ನೀಡಿದ್ದು, ಅವಿಶ್ವಾಸ ಗೊತ್ತುವಳಿ ತಿರಸ್ಕೃತ ಹಾಗೂ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜಿಸಿದ್ದ ನಿರ್ಧಾರ ಅಸಂವಿಧಾನಿಕ ಎಂದಿದೆ. ಡೆಪ್ಯೂಟಿ ಸ್ಪೀಕರ್ ಅವರ ನಿರ್ಧಾರ ಅಸಂವಿಧಾನಿಕ ಎಂದು ಸುಪ್ರೀಂ ಹೇಳಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಈ ಹಿಂದಿನ ಚುನಾವಣಾ ಪ್ರಸ್ತಾಪವನ್ನು ತಿರಸ್ಕರಿಸಿದೆ. ಹಾಗೂ ಏಪ್ರಿಲ್ 9ರಂದು ಬೆಳಗ್ಗೆ 10 ಗಂಟೆಗೆ ಬಹುಮತ ಸಾಬೀತು ಮಾಡುವಂತೆ ಇಮ್ರಾನ್ ಖಾನ್ ಗೆ ಸೂಚಿಸಿದೆ. ಅವಿಶ್ವಾಸ ನಿರ್ಣಯ ಯಶಸ್ವಿಯಾದರೆ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಅವರು ತೀರ್ಪಿನ ನಂತರ ಪಾಕಿಸ್ತಾನವನ್ನು ಉಳಿಸಲಾಗಿದೆ ಎಂದು ಹೇಳಿದರು.