ಇಸ್ರೇಲ್, ಏ 08 (DaijiworldNews/MS): ಟೆಲ್ ಅವೀವ್ ಬಾರ್ನಲ್ಲಿ ಇಬ್ಬರನ್ನು ಗುಂಡಿನ ದಾಳಿ ನಡೆಸಿ ಕೊಂದ ಪ್ಯಾಲೆಸ್ಟೀನಿಯಾದ ವ್ಯಕ್ತಿಯನ್ನು ಇಸ್ರೇಲಿ ಭದ್ರತಾ ಪಡೆಗಳು ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಿದೆ.
ದಾಳಿಯ ಬಳಿಕ ತಲೆಮರೆಸಿಕೊಂಡಿದ್ದ ಆತನಿಗಾಗಿ ಇಸ್ರೇಲ್ನ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಟೆಲ್ ಅವೀವ್ನ ದಕ್ಷಿಣ ಭಾಗದಲ್ಲಿರುವ ಜಾಫಾದಲ್ಲಿನ ಮಸೀದಿಯೊಂದರ ಬಳಿ ಶೂಟರ್ ಅಡಗಿಕೊಂಡಿದ್ದನ್ನು ಇಸ್ರೇಲಿ ಭದ್ರತಾ ಪಡೆಗಳು ಖಚಿತಪಡಿಸಿಕೊಂಡು, ಆತನ ಮೇಲೆ ಗುಂಡು ಹಾರಿಸಿ ಹತ್ಯೆ ನಡೆಸಿದೆ.
ಗುರುವಾರ ರಾತ್ರಿ ಟೆಲ್ ಅವೀವ್ನ ಪಬ್ನೊಳಗೆ ಪ್ರವೇಶಿಸಿದ್ದ ಹಂತಕ, ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ ಇಬ್ಬರು ಮೃತಪಟ್ಟರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ಬಳಿಕ ಹಂತಕನಿಗಾಗಿ ನಗರದಾದ್ಯಂತ ಭದ್ರತಾ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು.
ನೂರಾರು ಇಸ್ರೇಲಿ ಭದ್ರತಾ ಅಧಿಕಾರಿಗಳು, ಸ್ಪಾಟ್ಲೈಟ್ನೊಂದಿಗೆ ಹೆಲಿಕಾಪ್ಟರ್ನ ಸಹಾಯದಿಂದ ಬೀದಿಗಳಲ್ಲಿ ಅನ್ವೇಷಣೆಯಲ್ಲಿ ತೊಡಗಿದ್ದರಿಂದ ನಿವಾಸಿಗಳು ತಮ್ಮ ಮನೆಗಳನ್ನು ತೊರೆಯದಂತೆ ಎಚ್ಚರಿಕೆ ನೀಡಿದರು.
ಹತ್ಯೆಯಾದ ದಾಳಿಕೋರ 28 ವರ್ಷದವನಾಗಿದ್ದು ಇಸ್ರೇಲ್ ನಲ್ಲಿ ಅಕ್ರಮವಾಗಿ ನೆಲೆಸಿದ್ದು, ಪ್ಯಾಲೆಸ್ಟೀನಿಯಾದ ಜೆನಿನ್ ಪ್ರದೇಶದವನು ಎಂದು ತಿಳಿದುಬಂದಿದೆ.