ಕೋಸ್ಟರಿಕಾ, ಏ 08 (DaijiworldNews/MS): ತುರ್ತು ಲ್ಯಾಂಡಿಗ್ ಸಂದರ್ಭ ಸರಕು ವಿಮಾನವೊಂದು ಪೈಲಟ್ ನಿಯಂತ್ರಣ ತಪ್ಪಿ ಎರಡು ತುಂಡಾಗಿರುವ ಘಟನೆ ಕೋಸ್ಟರಿಕಾದ ಸ್ಯಾನ್ ಜೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.
ಜರ್ಮನ್ ಲಾಜಿಸ್ಟಿಕ್ಸ್ ದೈತ್ಯ ಸಂಸ್ಥೆ ಡಿಎಚ್ಎಲ್ಗೆ ಸೇರಿದ ವಿಮಾನದಿಂದ ಹೊಗೆ ಹೊರಹೊಮ್ಮುತ್ತಿತ್ತು ಹೀಗಾಗಿ ತುರ್ತು ಲ್ಯಾಂಡಿಗ್ ಸಂದರ್ಭ ವಿಮಾನ ರನ್ವೇಯಲ್ಲಿ ಇಳಿಯುವಾಗ ಪಕ್ಕಕ್ಕೆ ಸರಿದು ಎರಡು ತುಂಡಾಗಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೋಸ್ಟರಿಕಾದ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.
ಗ್ವಾಟೆಮಾಲ ಮೂಲದ ಸಿಬ್ಬಂದಿಯನ್ನು ‘ವೈದ್ಯಕೀಯ ತಪಾಸಣೆಗಾಗಿ’ ಆಸ್ಪತ್ರೆಗೆ ಕಳುಹಿಸಲಾಗಿದೆ . ಘಟನೆಯಿಂದ ಪೈಲಟ್ ಕೊಂಚ ವಿಚಲಿತರಾದಂತೆ ಕಂಡಬಂದರೂ ಇಬ್ಬರೂ ಸಿಬ್ಬಂದಿ ಸುರಕ್ಷಿತವಾಗಿದ್ದು, ಎಲ್ಲವೂ ಅವರಿಗೆ ಸ್ಪಷ್ಟವಾಗಿ ನೆನಪಿದೆ ಎಂದು ರೆಡ್ ಕ್ರಾಸ್ ಕಾರ್ಯಕರ್ತ ಗೈಡೋ ವಾಸ್ಕ್ವೆಜ್ ಹೇಳಿದ್ದಾರೆ.
ಬೋಯಿಂಗ್-757 ವಿಮಾನವು ಸ್ಯಾನ್ ಜೋಸ್ನ ಹೊರಗಿನ ಜುವಾನ್ ಸಾಂತಾಮಾರಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಬೆಳಿಗ್ಗೆ 10:30ರ ಸುಮಾರಿಗೆ ಇಳಿಯುವ ವೇಳೆ ಅಪಘಾತ ಸಂಭವಿಸಿದೆ. ಯಾಂತ್ರಿಕ ವೈಫಲ್ಯದಿಂದಾಗಿ ತುರ್ತು ಲ್ಯಾಂಡಿಂಗ್ಗೆ ಮುಂದಾದಾಗ ಈ ಅಪಘಾತ ಸಂಭವಿಸಿದೆ. ಹೈಡ್ರಾಲಿಕ್ ಸಮಸ್ಯೆಯ ಬಗ್ಗೆ ಸಿಬ್ಬಂದಿ ಸ್ಥಳೀಯ ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಿದ್ದರು ಎಂದು ಹೇಳಲಾಗಿದೆ.