ಲಾಸ್ ಏಂಜಲೀಸ್, ಏ 09 (DaijiworldNews/MS): ಆಸ್ಕರ್ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ನಿರೂಪಕನಿಗೆ ಕಪಾಳಮೋಕ್ಷ ಮಾಡಿ ಸುದ್ದಿಯಾಗಿದ್ದ ನಟ ವಿಲ್ ಸ್ಮಿತ್ ಅವರಿಗೆ ಹಾಲಿವುಡ್ ಫಿಲ್ಮ್ ಅಕಾಡೆಮಿಯು 10 ವರ್ಷಗಳ ಕಾಲ ಆಸ್ಕರ್ ಪ್ರಶಸ್ತಿ ಸಮಾರಂಭಗಳಿಂದ ನಿಷೇಧಿಸಿದೆ.
ಅಲ್ಲದೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆಯಂಡ್ ಸೈನ್ಸಸ್ ಆಡಳಿತ ಮಂಡಳಿ ಆಯೋಜಿಸುವ ಯಾವುದೇ ಸಭೆ- ಸಮಾರಂಭಗಳಲ್ಲಿ ಕೂಡಾ ಸ್ಮಿತ್ ಭಾಗವಹಿಸುವಂತಿಲ್ಲ ಎಂದು ನಿಷೇಧ ಹೇರಲಾಗಿದೆ.
"೨೦೨೨ ರಿಂದ ಏಪ್ರಿಲ್ 8 ರಿಂದ ಅನ್ವಯವಾಗುವಂತೆ 10 ವರ್ಷಗಳ ಅವಧಿಗೆ ವಿಲ್ಸ್ಮಿತ್ ಅವರನ್ನು ಅಕಾಡೆಮಿ ನಿಷೇಧ ಮಾಡಿದೆ. ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಒಳಗೊಂಡಂತೆ ಯಾವುದೇ ಅಕಾಡೆಮಿ ಕಾರ್ಯಕ್ರಮಗಳಿಗೆ ಹಾಜರಾಗಲು ಸ್ಮಿತ್ಗೆ ಅನುಮತಿ ನೀಡಲಾಗುವುದಿಲ್ಲ" ಎಂದು ಅಕಾಡೆಮಿ ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಸಿಇಒ ಡಾನ್ ಹಡ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಲ್ ಸ್ಮಿತ್ ಅವರ ರಾಜೀನಾಮೆಯನ್ನು ಅಂಗೀಕರಿಸುವುದರ ಜೊತೆಗೆ, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಲ್ ಸ್ಮಿತ್ ನಡೆದುಕೊಂಡ ರೀತಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂದು ಚರ್ಚಿಸಲು ಆಡಳಿತ ಮಂಡಳಿಯು ಸಭೆ ಸೇರಿತ್ತು. ಲಾಸ್ ಏಂಜಲೀಸ್ನಲ್ಲಿ ಶುಕ್ರವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರಂಭದಲ್ಲಿ ಈ ಸಭೆಯನ್ನು ಏಪ್ರಿಲ್ 18ರಂದು ನಿಗದಿ ಮಾಡಲಾಗಿತ್ತು. ಆದರೆ ಕಳೆದ ವಾರ ವಿಲ್ಸ್ಮಿತ್ ರಾಜೀನಾಮೆ ಘೋಷಿಸಿದ ನಂತರ, ಸಭೆಯನ್ನು ಶುಕ್ರವಾರದಂದೇ ನಡೆಸಲಾಗಿದೆ.
94ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಪತ್ನಿಯ ಬೋಳುತಲೆ ಕುರಿತು ಹಾಸ್ಯ ಮಾಡಿದ್ದ, ಕಾರ್ಯಕ್ರಮದ ನಿರೂಪಕ ಹಾಗೂ ಹಾಸ್ಯನಟ ಕ್ರಿಸ್ ರಾಕ್ಗೆ ನಟ ವಿಲ್ಸ್ಮಿತ್ ಕಪಾಳಮೋಕ್ಷ ಮಾಡಿದ್ದರು.