ಬೀಜಿಂಗ್, ಏ 12 (DaijiworldNews/DB): ಚೀನಾದಲ್ಲಿ ಮಾರ್ಚ್ 21ರಂದು ಸಂಭವಿಸಿದ ವಿಮಾನ ಪತನ ಘಟನೆಯಲ್ಲಿ ಸಹ ಪೈಲಟ್ ನಿಂದ ಯಾವುದೇ ತಪ್ಪು ಆಗಿಲ್ಲ ಎಂದು ಚೀನಾದ ವಿಮಾನ ಯಾನ ಪ್ರಾಧಿಕಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಹ ಪೈಲಟ್ನಿಂದ ಅವಘಡ ಸಂಭವಿಸಿರಬಹುದು ಎಂಬ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ ಪ್ರಾಧಿಕಾರವು, ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ತನಿಖೆ ಅಂತಿಮಗೊಳ್ಳದೆ ಯಾರ ಮೇಲೂ ಆರೋಪ ಹೊರಿಸುವುದು ಸರಿಯಲ್ಲ ಎಂದು ತಿಳಿಸಿದೆ.
ಸಾರ್ವಜನಿಕ ಭದ್ರತಾ ಸಂಸ್ಥೆ ಮೂಲಗಳಿಂದ ಜನರಿಗೆ ತಪ್ಪು ಮಾಹಿತಿ ಹೋಗಿ ವದಂತಿ ಹಬ್ಬಲು ಕಾರಣವಾಗಿದೆ. ಆದರೆ ಈ ರೀತಿಯ ವದಂತಿ ಆಪಾದನೆಗಳು ಸಾರ್ವಜನಿಕ ಹಿತಾಸಕ್ತಿಯ ಉಲ್ಲಂಘನೆಯಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ.
132 ಪ್ರಯಾಣಿಕರನ್ನು ಹೊತ್ತ ಚೀನಾ ಈಸ್ಟರ್ನ್ ಏರ್ಲೈನ್ಸ್ ನ ಬೋಯಿಂಗ್ 737-800 ವಿಮಾನವು ಮಾರ್ಚ್ 21ರಂದು ಪತನಗೊಂಡು ಒಂಬತ್ತು ಮಂದಿ ಸಿಬಂದಿ ಸೇರಿದಂತೆ ಎಲ್ಲರೂ ಮೃತಪಟ್ಟಿದ್ದರು.