ಜೊಹಾನ್ಸ್ಬರ್ಗ್, ಏ 13 (DaijiworldNews/DB): ಭಾರಿ ಪ್ರವಾಹ ಮತ್ತು ಭೂಕುಸಿತದಿಂದಾಗಿ ದಕ್ಷಿಣ ಆಫ್ರಿಕಾದ ಡರ್ಬನ್ ನಗರದ ಚಾಟ್ಸ್ವರ್ತ್ನಲ್ಲಿ 70 ವರ್ಷ ಹಳೆಯ ದೇವಸ್ಥಾನ ಸೇರಿದಂತೆ ಹಲವಾರು ಕಟ್ಟಡಗಳು ನಾಶವಾಗಿವೆ.
ಇಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಭಕ್ತರ ಕಣ್ಣೆದುರೇ ದೇವಸ್ಥಾನ ಕೊಚ್ಚಿ ಹೋಗಿದೆ. ಆದರೆ ದೇವರ ವಿಗ್ರಹಗಳು ಹಾಗೆಯೇ ಉಳಿದುಕೊಂಡಿವೆ. ವಿಗ್ರಹಗಳು ಗಟ್ಟಿಯಾದ ಗ್ರಾನೈಟ್ನಿಂದ ಮಾಡಿದ್ದು, ದೇಗುಲದ ಅಡಿಪಾಯದೊಂದಿಗೆ ಪ್ರತಿಷ್ಠಾಪಿಸಿರುವುದರಿಂದ ವಿಗ್ರಹಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ದೇವಸ್ಥಾನದ ಸಮಿತಿಯ ಸಹಾಯಕ ಕಾರ್ಯದರ್ಶಿ ಕುರೇಶಾ ಮೂಡಲೀ ತಿಳಿಸಿದ್ದಾರೆ.
ಕನಿಷ್ಠ 45 ಮಂದಿ ಮಳೆಯಿಂದಾಗಿ ಸಾವನ್ನಪ್ಪಿದ್ದು, ನೂರಾರು ಮಂದಿಗೆ ಗಾಯಗಳಾಗಿವೆ. ಹೆದ್ದಾರಿಗಳು, ನಗರ ರಸ್ತೆಗಳು ಮಳೆಗೆ ಆಹುತಿಯಾಗಿದ್ದು, ಹಲವು ಕಾರುಗಳು ಕೊಚ್ಚಿಹೋಗಿವೆ. ಸಮುದ್ರ ತೀರ ಪ್ರದೇಶಗಳಲ್ಲಿ ಚಂಡಮಾರುತವೂ ತೀವ್ರವಾಗಿದೆ.