ಕೀವ್, ಏ 14 (DaijiworldNews/DB): ಉಕ್ರೇನ್ನ ಖಾರ್ಕೀವ್ ನಗರದಲ್ಲಿ ರಷ್ಯಾ ಪಡೆಗಳು ಶೆಲ್ ದಾಳಿ ನಡೆಸಿದ ಪರಿಣಾಮ ಏಳು ಮಂದಿ ನಾಗರಿಕರು ಬುಧವಾರ ಮೃತಪಟ್ಟಿದ್ದಾರೆ. ಮಂಗಳವಾರದಿಂದ ಎರಡು ದಿನಗಳ ಕಾಲ ಇಲ್ಲಿ ಸತತ ದಾಳಿ ನಡೆದಿದೆ.
ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಗಾಯಾಳು ಬಾಲಕನೊಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೂವರು ಮಕ್ಕಳು ಸೇರಿದಂತೆ 22 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಪ್ರಾಂತೀಯ ಗವರ್ನರ್ ತಿಳಿಸಿದ್ದಾರೆ.
ರಷ್ಯಾ-ಉಕ್ರೇನ್ ಸಮರ ನಿರಂತರವಾಗಿ ನಡೆಯುತ್ತಿದ್ದು, ರಷ್ಯಾವು ಉಕ್ರೇನ್ ಮೇಲೆ ಹೊಸ ಹೊಸ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಇದರಿಂದ ನಾಗರಿಕರ ಮೇಲೆ ವಿಷ ಅಂಶಗಳು ಪ್ರಭಾವ ಬೀರುತ್ತಿದ್ದು, ಮಾರಣಾಂತಿಕವಾಗಿ ಪರಿಣಮಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೆಡಿಮಿರ್ ಝೆಲೆನ್ಸ್ಕಿ ಅಳಲು ತೋಡಿಕೊಂಡಿದ್ದಾರೆ. ಆರಂಭದಿಂದ ಇಲ್ಲಿಯವರೆಗೆ ಉಕ್ರೇನ್ನ ಬಂದರು ನಗರ ಮರಿಯುಪೋಲ್ನಲ್ಲಿ 21 ಸಾವಿರ ನಾಗರಿಕರು ರಷ್ಯಾ ದಾಳಿಯಿಂದ ಜೀವ ಕಳೆದುಕೊಂಡಿದ್ದಾರೆ ಎಂದು ಮರಿಯುಪೋಲ್ ಮೇಯರ್ ವಾಡಿಮ್ ಬಾಯೆನ್ಕೋ ತಿಳಿಸಿದ್ದಾರೆ.
ಇನ್ನು ಯುದ್ದದಲ್ಲಿ ಸಾವಿರಾರು ಮಂದಿ ರಷ್ಯಾ ಸೈನಿಕರೂ ಮೃತಪಟ್ಟಿದ್ದಾರೆ. ಮಡಿದ ರಷ್ಯಾ ಸೈನಿಕರ ಶವಗಳು ಉಕ್ರೇನ್ನ ಆಸ್ಪತ್ರೆಗಳ ಶವಾಗಾರದಲ್ಲಿದ್ದು, ರಷ್ಯಾ ಈ ಶವಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಉಕ್ರೇನ್ನ ವಿವಿಧ ಆಸ್ಪತ್ರೆಗಳಲ್ಲಿರುವ ಶವಾಗಾರಗಳಲ್ಲಿ ಒಟ್ಟು 1,500 ರಷ್ಯಾ ಯೋಧರ ಶವಗಳಿದ್ದು, ಕೆಲವು ಆಸ್ಪತ್ರೆಗಳಲ್ಲಿ ಜಾಗವೇ ಇಲ್ಲದಂತಾಗಿದೆ ಎಂದು ಡಿನಿಪ್ರೋ ನಗರದ ಮೇಯರ್ ಮಿಖಾಯಿಲ್ ಲಿಸೆನ್ಕೋ ಹೇಳಿದ್ದಾರೆ. ಮಡಿದ ರಷ್ಯಾ ಸೈನಿಕರ ಶವಗಳನ್ನು ಅವರ ತಾಯಂದಿರೇ ಬಂದು ಕೊಂಡೊಯ್ಯಬೇಕು ಎಂದವರು ಮನವಿ ಮಾಡಿದ್ದಾರೆ.