ವಾಷಿಂಗ್ಟನ್, ಏ 18 (DaijiworldNews/SM) : ಜಗತ್ತಿನ ಅತ್ಯಂತ ಬೃಹತ್ ಧೂಮಕೇತುವೊಂದನ್ನು ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕ ಯಂತ್ರ ಪತ್ತೆಹಚ್ಚಿದೆ. ಬರೋಬ್ಬರಿ 80 ಮೈಲುಗಳ ಸುತ್ತಳತೆ ಹೊಂದಿರುವ ಈ ಧೂಮಕೇತು, ಮಾನವ ಜನಾಂಗ ಬಲ್ಲ ಅತ್ಯಂತ ದೈತ್ಯ ಧೂಮಕೇತುವಾಗಿದೆ ಎಂದು ನಾಸಾದ ಖಗೋಳ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಮಾನವ ಸಂಕುಲವನ್ನು ಅನಾದಿ ಕಾಲದಿಂದಲೂ ಅಚ್ಚರಿ ಪಡಿಸುತ್ತಿದ್ದ ಬಾಹ್ಯಾಕಾಶದ ಒಡಲು ಇದೀಗ ಮತ್ತೆ ಅತೀ ದೊಡ್ಡ ಅಚ್ಚರಿಯನ್ನು ನೀಡಿದೆ. ಖಗೋಳಶಾಸ್ತ್ರಜ್ಞರಾದ ಪೆಡ್ರೊ ಬರ್ನಾರ್ಡಿನೆಲ್ಲಿ ಮತ್ತು ಗ್ಯಾರಿ ಬರ್ನ್ಸ್ಟೈನ್ ಅವರು ಚಿಲಿಯ ಟೊಲೊಲೊ ಇಂಟರ್-ಅಮೆರಿಕನ್ ವೀಕ್ಷಣಾಲಯದಲ್ಲಿ ಈ ಧೂಮಕೇತುವಿನ ಇರುವಿಕೆಯನ್ನು ಪತ್ತೆಹಚ್ಚಿದ್ದಾರೆ. ಹಾಗಾಗಿ ಈ ಧೂಮಕೇತುವಿಗೆ ಬರ್ನಾರ್ಡಿನೆಲ್ಲಿ-ಬರ್ನ್ಸ್ಟೈನ್ ಎಂದು ಹೆಸರಿಡಲಾಗಿದೆ. C/2014 UN271 ಅಥವಾ ಬರ್ನಾರ್ಡಿನೆಲ್ಲಿ-ಬರ್ನ್ಸ್ಟೈನ್ ಎಂದು ಹೆಸರಿಸಲಾಗಿರುವ ಈ ಧೂಮಕೇತು, ಗಾತ್ರದಲ್ಲಿ ರೋಡ್ ಐಲೆಂಡ್ ರಾಜ್ಯಕ್ಕಿಂತ ದೊಡ್ಡದು ಎಂದು ನಾಸಾದ ಖಗೋಳ ವಿಜ್ಞಾನಿಗಳು ಬಣ್ಣಿಸಿದ್ದಾರೆ. ಅಲ್ಲದೇ ಧೂಮಕೇತುವಿನ ಕೇಂದ್ರಬಿಂದು ಸಾಮಾನ್ಯ ಧೂಮಕೇತುಗಳ ಕೇಂದ್ರಬಿಂದುವಿಗಿಂತ ಶೇ.50 ಪಟ್ಟು ದೊಡ್ಡದಾಗಿದೆ ಎಂದು ಹೇಳಲಾಗಿದೆ. 'ದಿ ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್ನಲ್ಲಿ ' ಈ ಧೂಮಕೇತುವಿನ ಬಗ್ಗೆ ಸಂಶೋಧನಾ ವರದಿ ಪ್ರಕಟಿಸಲಾಗಿದ್ದು, ಮುಂದಿನ ಒಂದು ದಶಕದ ಅವಧಿಯಲ್ಲಿ ಈ ಧೂಮಕೇತು ಸೂರ್ಯನನ್ನು ಒಂದು ಸುತ್ತು ಸುತ್ತುವರೆಯಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ. ಪ್ರತಿ ಗಂಟೆಗೆ 22,000 ಮೈಲು ಮೈಲುಗಳಷ್ಟು ವೇಗದಲ್ಲಿ ಚಲಿಸುತ್ತಿರುವ ಬರ್ನಾರ್ಡಿನೆಲ್ಲಿ-ಬರ್ನ್ಸ್ಟೈನ್ ಧೂಮಕೇತು, 2031ರಲ್ಲಿ ಸೂರ್ಯನನ್ನು ಒಂದು ಬಿಲಿಯನ್ ಮೈಲು ದೂರದಿಂದ ಹಾದು ಹೋಗಲಿದೆ ಎಂದು ಸಂಶೋಧನಾ ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಬೃಹತ್ ಗಾತ್ರದ ಈ ಧೂಮಕೇತುವನ್ನು 2010ರಲ್ಲಿ ಆಕಸ್ಮಿಕವಾಗಿ ಪತ್ತೆಹಚ್ಚಲಾಗಿತ್ತು. ಆಗ ಈ ಧೂಮಕೇತು ಸೂರ್ಯನಿಂದ 3 ಬಿಲಿಯನ್ ಮೈಲುಗಳಷ್ಟು ದೂರದಲ್ಲಿತ್ತು ಎಂದು ಖಗೋಳ ವಿಜ್ಷಾನಿಗಳು ಅಂದಾಜಿಸಿದ್ದಾರೆ. ಅಷ್ಟು ದೂರದಿಂದಲೂ ಈ ಧೂಮಕೇತು ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತಿರುವುದನ್ನು ಕಂಡ ಖಗೋಳ ವಿಜ್ಞಾನಿಗಳು, ಈ ಕುರಿತು ಹೆಚ್ಚಿನ ಅಧ್ಯಯನ ನಡೆಸಿದಾಗ, ಇದುವರೆಗೂ ನೋಡಿದ ಅತ್ಯಂತ ಬೃಹತ್ ಧೂಮಕೇತು ಎಂಬುದು ದೃಢಪಟ್ಟಿತು ಎಂದು ಖಗೋಳ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಹಬಲ್ ಟೆಲಿಸ್ಕೋಪ್ ಮೂಲಕ 2022ರ ಜನವರಿಯಲ್ಲಿ ಈ ಬೃಹತ್ ಧೂಮಕೇತುವಿನ ಚಿತ್ರ ಸೆರೆಹಿಡಿದಾಗ ಇದರ ನೈಜ ಗಾತ್ರದ ಪರಿಚಯವಾಯಿತು ಬೃಹತ್ ಗಾತ್ರ ಹೊಂದಿರುವ ಈ ಧೂಮಕೇತು ನಿಜಕ್ಕೂ ಬ್ರಹ್ಮಾಂಡದ ಅಚ್ಚರಿಗಳಲ್ಲಿ ಒಂದು ಎಂದು ನಾಸಾ ಹೇಳಿದೆ. ಸೂರ್ಯನಿಂದ 2 ಬಿಲಿಯನ್ ಮೈಲು ದೂರದಲ್ಲಿರುವ ಈ ಧೂಮಕೇತುವಿನ ಮೇಲ್ಮೈ ಉಷ್ಣಾಂಶ -348 ಡಿಗ್ರಿ ಸೆಲ್ಸಿಯಸ್ನಷ್ಟಿದೆ ಎಂದು ನಾಸಾ ಸ್ಪಷ್ಟಪಡಿಸಿದೆ. ಈ ಬೃಹತ್ ಗಾತ್ರದ ಧೂಮಕೇತುವಿನ ಬಗ್ಗೆ ಇನ್ನೂ ಕೂಡಾ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.