ಸಿಡ್ನಿ, ಏ 20 (DaijiworldNews/DB): ಭಾರೀ ಮಳೆ ಸುರಿದ ನಂತರ ಆಸ್ಟ್ರೇಲಿಯಾದ ಸಿಡ್ನಿ ಕಡಲ ತೀರಗಳಲ್ಲಿ ವಿಚಿತ್ರ ಬಣ್ಣದ ಸೀ ಡ್ರಾಗನ್ಗಳು ಪತ್ತೆಯಾಗಿವೆ. ಡಜನ್ ಗಟ್ಟಲೆ ಪ್ರಮಾಣದಲ್ಲಿ ತೀರದಲ್ಲಿ ಕಳೆಗುಂದಿದ ರೀತಿಯಲ್ಲಿ ಬಿದ್ದುಕೊಂಡಿವೆ.
ಆಸ್ಟ್ರೇಲಿಯಾದಲ್ಲಿ ದಾಖಲೆ ಮಳೆ ಸಂಭವಿಸಿದ ನಂತರ ಈ ವೀಡಿ ಸೀ ಡ್ರಾಗನ್ಗಳು ಕಾಣಿಸಿಕೊಂಡು ವಿಚಿತ್ರ ಬಣ್ಣದಲ್ಲಿರುವ ಇವುಗಳನ್ನು ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಸಿಡ್ನಿ ಕಡಲ ತೀರಕ್ಕೆ ಆಗಮಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪೂರ್ವ ಮತ್ತು ದಕ್ಷಿಣ ಕರಾವಳಿಯಲ್ಲಿ ಮಾತ್ರ ಕಂಡು ಬರುವ ಇವು ಭಾರೀ ಮಳೆಯ ಬಳಿಕ ಕ್ರೊನುಲ್ಲಾ, ಮಲಬಾರ್ ಮತ್ತು ಮಧ್ಯ ಕರಾವಳಿಯಲ್ಲಿ ಇವು ಕಂಡು ಬಂದಿವೆ. ಮಾಲಿನ್ಯ, ಹವಾಮಾನ ವೈಪರೀತ್ಯ ಕಾರಣದಿಂದ ಬಣ್ಣ ಈ ರೀತಿ ಬದಲಾಗುತ್ತದೆ ಎಂದು ಸಿಡ್ನಿ ವಿಶ್ವವಿದ್ಯಾಲಯದ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಸಮುದ್ರ ಪರಿಸರ ವಿಜ್ಞಾನದ ಪ್ರಾಧ್ಯಾಪಕ ಡಾ. ಡೇವಿಡ್ ಬೂತ್ ಹೇಳಿರುವುದಾಗಿ ವರದಿಯಾಗಿದೆ.
ಸಾಮಾನ್ಯವಾಗಿ ಈ ಸೀ ಡ್ರಾಗನ್ಗಳು ತಮ್ಮ ಆವಾಸಸ್ಥಾನದಿಂದ 50 ಮೀ. ದೂರದವವರೆಗೆ ಮಾತ್ರ ಸಂಚಾರ ನಡೆಸುತ್ತವೆ. ಆದರೆ ಇದೀಗ ಕಡಲ ತೀರದವರೆಗೂ ಬಂದಿರುವುದು ಆಶ್ಚರ್ಯವುಂಟು ಮಾಡಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಸಾಮಾನ್ಯ ಆಕಾರ, ವಿಚಿತ್ರ ಬಣ್ಣ ಮತ್ತು ರೋಮಾಂಚಕ ವೈಶಿಷ್ಟ್ಯಗಳಿಂದಾಗಿ ಹೆಚ್ಚಿನ ಜನ ಕುತೂಹಲದಿಂದ ನೋಡುವಂತೆ ಮಾಡುತ್ತಿವೆ.