ಲಂಡನ್ , ಏ 22 (DaijiworldNews/MS): ತೀವ್ರ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವ ಬ್ರಿಟನ್ನಿನ ರೋಗಿಯೊಬ್ಬರು ಸುಮಾರು ಒಂದೂವರೆ ವರ್ಷಗಳ ಕಾಲ ಕೋವಿಡ್ ಜೊತೆ ಹೋರಾಡಿದ್ದಾರೆ ಎನ್ನುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದು, ಹೀಗಾಗಿ, ಈ ಪ್ರಕರಣದಲ್ಲಿ ದುರ್ಬಲ ಪ್ರತಿರಕ್ಷಣಾ ಹೊಂದಿರುವ ಜನರನ್ನು ಕೊರೊನಾದಿಂದ ರಕ್ಷಿಸಬೇಕಾದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ.
505 ದಿನಗಳ ಸೋಂಕು, 'ನಿಸ್ಸಂಶಯವಾಗಿ ಇದು ಈವರೆಗೆ ವರದಿಯಾದ ಅತ್ಯಂತ ದೀರ್ಘವಾದ ಕೋವಿಡ್ ಸೋಂಕು ಎಂದು ತೋರುತ್ತದೆ' ಎಂದು ಗೈಸ್ ಮತ್ತು ಸೇಂಟ್ ಥಾಮಸ್ ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್ನ ಸಾಂಕ್ರಾಮಿಕ ರೋಗ ತಜ್ಞ ಡಾ. ಲ್ಯೂಕ್ ಬ್ಲಾಗ್ಡನ್ ಸ್ನೆಲ್ ಹೇಳಿದ್ದಾರೆ.
ಇದಲ್ಲದೆ ದೀರ್ಘಾವಧಿಯ ಕಾಲ ಸೋಂಕಿನಿಂದ ಬಳಲುವ ಜನರಲ್ಲಿ ಯಾವ ರೂಪಾಂತರಗಳು ಉದ್ಭವಿಸುತ್ತವೆ ಮತ್ತು ಆ ರೂಪಾಂತರಗಳು ವಿಕಸನಗೊಳ್ಳುತ್ತವೆಯೇ ಎಂದು ತಂಡ ತನಿಖೆ ಮಾಡಿದೆ.
ಈ ತನಿಖಾ ತಂಡ ಇದಲ್ಲದೆ ಅಂಗಾಂಗ ಕಸಿ, ಎಚ್ಐವಿ, ಕ್ಯಾನ್ಸರ್ ಅಥವಾ ಇತರ ಕಾಯಿಲೆಗಳಿಗೆ ಚಿಕಿತ್ಸೆಯಿಂದ ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವ ಸುಮಾರು ಒಂಬತ್ತು ರೋಗಿಗಳನ್ನು ಈ ಪರೀಕ್ಷೆಗೆ ಒಳಪಡಿಸಿದೆ. ಪುನರಾವರ್ತಿತ ಪರೀಕ್ಷೆಗಳು ಅವರಲ್ಲಿ ಸೋಂಕು ಸರಾಸರಿ 73 ದಿನಗಳವರೆಗೆ ಇರುವುದನ್ನು ತೋರಿಸಿದೆ. ಇಬ್ಬರ ದೇಹದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ವೈರಸ್ ಇತ್ತು. ಈ ಹಿಂದೆ, ಪಿಸಿಆರ್ ಪರೀಕ್ಷೆಯೊಂದಿಗೆ ದೃಢೀಕರಿಸಲ್ಪಟ್ಟ ದೀರ್ಘಾವಧಿಯ ಕೋವಿಡ್ ಪ್ರಕರಣವು 335 ದಿನಗಳವರೆಗೆ ಸಕ್ರಿಯವಾಗಿ ಇತ್ತು ಎಂದು ಸಂಶೋಧಕರು ಹೇಳಿದ್ದಾರೆ. ನಿರಂತರವಾದ ಕೋವಿಡ್ ಸೋಂಕು ಅಪರೂಪ ಮತ್ತು ದೀರ್ಘ ಕೋವಿಡ್ಗಿಂತ ಭಿನ್ನವಾಗಿದೆ.
ಈ ವಾರಾಂತ್ಯದಲ್ಲಿ ಪೋರ್ಚುಗಲ್ನಲ್ಲಿ ನಡೆಯಲಿರುವ ಸಾಂಕ್ರಾಮಿಕ ರೋಗಗಳ ಸಭೆಯಲ್ಲಿ ತಂಡವು ಈ ದೀರ್ಘಕಾಲದ ಕೋವಿಡ್ ಪ್ರಕರಣಗಳನ್ನು ಪ್ರಸ್ತುತಪಡಿಸಲು ಯೋಜಿಸಿದೆ.