ನ್ಯೂಯಾರ್ಕ್, ಏ 26 (DaijiworldNews/MS): ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಹಾಗೂ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ , ವಿಶ್ವದ ಪ್ರಮುಖ ಜಾಲತಾಣ ಟ್ವಿಟ್ಟರ್ ಕಂಪನಿಯನ್ನು ಖರೀದಿಸಿದ್ದಾರೆ.
ಟ್ವಿಟರ್ನ ಪ್ರತಿ ಷೇರಿಗೆ 54.20 ಡಾಲರ್ ನೀಡಿ ಪೂರ್ತಿ ಷೇರು ಖರೀದಿಸುವ ಎಲಾನ್ ಮಸ್ಕ್ ಪ್ರಸ್ತಾಪವನ್ನು ಟ್ವಿಟರ್ ಆಡಳಿತ ಮಂಡಳಿ ಒಪ್ಪಿದ್ದು, ಅದರಂತೆ ಹಲವು ದಿನಗಳಿಂದ ನಡೆಯುತ್ತಿದ್ದ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿದೆ.ಪ್ರತಿ ಷೇರಿಗೆ 54.20 ಡಾಲರ್ನಂತೆ 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟರ್ ಖರೀದಿ ಮಾಡಲು ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.
ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟ್ಟರ್ ಅನ್ನು 44 ಬಿಲಿಯನ್ ಅಮೆರಿಕ ಡಾಲರ್ ಅಂದರೆ ಭಾರತೀಯ ರೂಪಾಯಿಲೆಕ್ಕದಲ್ಲಿ ಬರೋಬ್ಬರಿ 3.36 ಲಕ್ಷ ಕೋಟಿ ರೂಪಾಯಿಗೆ ಎಲಾನ್ ಮಸ್ಕ್ ಸ್ವಾಧೀನಪಡಿಸಿಕೊಂಡಿದ್ದಾರೆ
2013ರಿಂದ ಟ್ವಿಟರ್ ಸಾರ್ವಜನಿಕ ಷೇರು ಮೂಲಕ ಹೂಡಿಕೆ ಕಂಪನಿಯಾಗಿ ಬದಲಾಗಿತ್ತು. ಆದರೆ ಈಗ ಪೂರ್ತಿ ಷೇರು ಮಾರಾಟವಾಗಿ, ಎಲಾನ್ ಮಸ್ಕ್ ತೆಕ್ಕೆಗೆ ಬಂದಿರುವುದರಿಂದ, ಮುಂದೆ ಖಾಸಗಿ ಕಂಪನಿಯಾಗಿ ಮುಂದುವರಿಯಲಿದೆ.
ಏಪ್ರಿಲ್ 14ರಂದು ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಯ ಪ್ರಸ್ತಾಪ ಮಾಡಿದ್ದರು. ಅಲ್ಲದೆ, ಅಧಿಕ ಷೇರು ಪಾಲು ಹೊಂದಿದ್ದರೂ, ಟ್ವಿಟರ್ ಮಂಡಳಿ ಸೇರುವ ಆಹ್ವಾನವನ್ನು ತಿರಸ್ಕರಿಸಿದ್ದರು. ಇದೀಗ ಪೂರ್ತಿ ಷೇರು ಖರೀದಿಸಿ, ಕಂಪನಿಯನ್ನೇ ತನ್ನದಾಗಿಸಿಕೊಂಡಿದ್ದಾರೆ ಉದ್ಯಮಿ ಮಸ್ಕ್ . ಈ ಕುರಿತು ಎಲಾನ್ ಮಸ್ಕ್ ಟ್ವೀಟ್ ಮಾಡಿ, ಟ್ವಿಟರ್ ಖರೀದಿಯನ್ನು ‘Yessss’ ಎಂದು ಸಂಭ್ರಮಿಸಿ ಟ್ವಿಟರ್ ಪ್ರಚಂಡ ಸಾಮರ್ಥ್ಯವನ್ನು ಹೊಂದಿದೆ - ಅದನ್ನು ಅನ್ಲಾಕ್ ಮಾಡಲು ಕಂಪನಿ ಮತ್ತು ಬಳಕೆದಾರರ ಸಮುದಾಯದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.