ಸೌದಿ ಅರೇಬಿಯಾ, ಏ 29 (DaijiworldNews/DB): ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ನಿಯೋಗವು ಮದೀನಾದ ಮಸೀದಿಗೆ ತೆರಳಿದ ವೇಳೆ ಅಲ್ಲಿದ್ದ ಯಾತ್ರಿಕರು ಚೋರ್ ಚೋರ್ ಎಂದು ಕೂಗಿದ ಪ್ರಸಂಗ ನಡೆದಿದ್ದು, ಪಾಕ್ ಪ್ರಧಾನಿಗೆ ತೀವ್ರ ಮುಖಭಂಗ ಎದುರಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶೆಹಬಾಜ್ ಷರೀಫ್ ನೇತೃತ್ವದ ನಿಯೋಗವು ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಮದೀನಾದ ಪವಿತ್ರ ಮಸೀದಿ-ಎ-ನವಾಬಿಗೆ ತೆರಳುತ್ತಿದ್ದ ವೇಳೆ ಅಲ್ಲಿ ಸೇರಿದ್ದ ಯಾತ್ರಿಕರು 'ಚೋರ್-ಚೋರ್' ಎಂದು ಕೂಗಿದ್ದಾರೆ. ಅವರು ಮೂರು ದಿನಗಳ ಭೇಟಿಗಾಗಿ ತೆರಳಿದ್ದ ವೇಳೆ ಮೊದಲ ದಿನವೇ ಮುಖಭಂಗ ಎದುರಿಸಬೇಕಾದ ಘಟನೆ ನಡೆದಿದೆ. ಪಾಕಿಸ್ತಾನದ ಮಾಹಿತಿ ಸಚಿವ ಮರಿಯುಮ್ ಔರಂಗಜೇಬ್ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಶಹಜೈನ್ ಬುಗ್ತಿ ಮತ್ತಿತರರು ವೀಡಿಯೋದಲ್ಲಿ ಕಾಣಿಸುತ್ತಿದ್ದಾರೆ.
ಸದ್ಯ ಈ ವೀಡಿಯೋ ವೈರಲ್ ಆಗುತ್ತಿದ್ದು, ಹಲವು ಮಂದಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಟ್ವೀಟರ್ ಬಳಕೆದಾರರೊಬ್ಬರು ಸೌದಿಯಲ್ಲಿ ಪಾಕ್ ಪ್ರಧಾನಿ ಮತ್ತವರ ಗ್ಯಾಂಗ್ಗೆ ಎಂತಹ ಸ್ವಾಗತ ಸಿಕ್ಕಿದೆ ಎಂಬುದನ್ನು ಕಣ್ತುಂಬಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ಘೋಷಣೆ ಕೂಗಿದ ವ್ಯಕ್ತಿಗಳನ್ನು ಮದೀನಾದ ಪಾವೀತ್ರ್ಯ ಉಲ್ಲಂಘನೆ ಆರೋಪದಡಿ ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.