ಅಫ್ಘಾನಿಸ್ತಾನ, ಏ 30 (DaijiworldNews/DB): ಪಶ್ಚಿಮ ಕಾಬೂಲ್ನ ಖಲೀಫಾ ಸಾಹೀಬ್ ಮಸೀದಿಯಲ್ಲಿ ಶುಕ್ರವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಪ್ರಾರ್ಥನೆ ಸಲ್ಲಿಸುತ್ತಿದ್ದ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಸುನ್ನಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಈ ಬಾಂಬ್ ದಾಳಿ ನಡೆದಿದೆ. ಶುಕ್ರವಾರ ಪ್ರಾರ್ಥನೆ ಇದ್ದ ಕಾರಣ ಅದೇ ಸಮಯವನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ದಾಳಿಕೋರ ಪ್ರಾರ್ಥನೆ ಸಲ್ಲಿಸುವ ನೆಪದಲ್ಲಿ ಬಂದಿದ್ದು, ತನ್ನನ್ನೂ ಸ್ಪೋಟಿಸಿಕೊಂಡಿದ್ದಾನೆ.
ಸ್ಪೋಟದ ತೀವ್ರತೆಗೆ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, 50ಕ್ಕೂ ಅಧಿಕ ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳ ಚೀರಾಟದ ದೃಶ್ಯ ಮನಕಲಕುವಂತಿತ್ತು. ತತ್ಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.