ಕೈವ್, ಮೇ 02 (DaijiworldNews/DB): ಉಕ್ರೇನ್ನ ಡ್ರೋನ್ಗಳೆರಡು ಕಪ್ಪು ಸಮುದ್ರದ ಸ್ನೇಕ್ ದ್ವೀಪದ ಬಳಿ ರಷ್ಯಾದ ಎರಡು ಗಸ್ತು ದೋಣಿಗಳನ್ನು ಧ್ವಂಸ ಮಾಡಿದೆ.
ಈ ಕುರಿತು ಉಕ್ರೇನ್ ರಕ್ಷಣಾ ಸಚಿವಾಲಯವು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿ, ಸೋಮವಾರ ಮುಂಜಾನೆ ಡ್ರೋನ್ ದಾಳಿ ನಡೆದಿದ್ದು, ಸ್ನೇಕ್ ಐಲ್ಯಾಂಡ್ ಬಳಿ ರಷ್ಯಾದ ರಾಪ್ಟರ್ ದೋಣಿಗಳನ್ನು ಹೊಡೆದುರುಳಿಸಲಾಗಿದೆ. ರಷ್ಯಾದ ಯುದ್ದನೌಕೆಯಲ್ಲಿದ್ದ ಸಿಬಂದಿ ಶರಣಾಗಲು ಬಯಸದ ಕಾರಣ ಅವರಿದ್ದ ದೋಣಿಯನ್ನು ನಾಶಪಡಿಸಲಾಗಿದೆ ಎಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಮಿಲಿಟರಿ ಹಡಗಿನ ಮೇಲೆ ಸ್ಫೋಟಗೊಂಡ ಕಪ್ಪು ಮತ್ತು ಬಿಳಿ ಏರಿಯಲ್ ತುಣುಕನ್ನು ಸಚಿವಾಲಯ ಬಿಡುಗಡೆಗೊಳಿಸಿದೆ.
ಸಾಮಾನ್ಯವಾಗಿ ಇಂತಹ ದೋಣಿಗಳಲ್ಲಿ ಗರಿಷ್ಠ 20 ಮಂದಿಯನ್ನು ಹೊತ್ತೊಯ್ಯಲು ಸಾಧ್ಯವಾಗುತ್ತದೆ. ವಿಚಕ್ಷಣ ಅಥವಾ ಲ್ಯಾಂಡಿಂಗ್ ಕಾರ್ಯಾಚರಣೆಗಳಲ್ಲಿ ಇಂತಹ ದೋಣಿಗಳು ಬಳಕೆಯಾಗುತ್ತವೆ ಎಂದು ವರದಿಗಳು ತಿಳಿಸಿವೆ.