ಕಟ್ಮಂಡು, ಮೇ 08 (DaijiworldNews/DB): ನೇಪಾಳ ಮೂಲದ 52 ವರ್ಷದ ವ್ಯಕ್ತಿಯೋರ್ವರು 26ನೇ ಬಾರಿ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರುವ ಮೂಲಕ ತನ್ನದೇ ದಾಖಲೆಯನ್ನು ಮುರಿದಿದ್ದಾರೆ.
ನೇಪಾಳದ ಶೆರ್ಪಾ ರೀಟಾ ಅವರೇ 26 ನೇ ಬಾರಿಗೆ ಮೌಂಟ್ ಎವರೆಸ್ಟ್ ಏರಿದವರು. ರೀಟಾ ಮತ್ತು ಅವರ 11 ಶೆರ್ಪಾ ಮಾರ್ಗದರ್ಶಿಗಳ ಗುಂಪು ಶನಿವಾರ ಸಂಜೆ 6.55ಕ್ಕೆ ಎವರೆಸ್ಟ್ನ ತುದಿಗೆ ತಲುಪಿತು. 8,848.86-ಮೀಟರ್ ಎತ್ತರವಿರುವ ಶಿಖರ ಏರಿದ ರೀಟಾ ತಮ್ಮದೇ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾದರು ಎಂದು ಸೆವೆನ್ ಸಮ್ಮಿಟ್ ಟ್ರೆಕ್ಸ್ ಪ್ರೈವೇಟ್ ಲಿಮಿಟೆಡ್ನ ಮ್ಯಾನೇಜರ್ ದಾವಾ ಶೆರ್ಪಾ ಹೇಳಿರುವುದಾಗಿ ವರದಿಯಾಗಿದೆ.
ಇವರು ಟ್ರೆಕ್ಕಿಂಗ್ ಸಾಗುವಾಗ ಹಗ್ಗಗಳನ್ನು ಬಳಸಿ ಶಿಖರ ಏರತೊಡಗಿದ್ದರು. ಆ ಮೂಲಕ ಯಶಸ್ವಿಯಾಗಿ ಶಿಖರ ತಲುಪಿದರು. 1994 ರ ಮೇ 13ರಂದು ಮೊದಲ ಬಾರಿಗೆ ಎವರೆಸ್ಟ್ ಹತ್ತಿದ ರೀಟಾ, ಆನಂತರ ಎವರೆಸ್ಟ್ ಏರುವುದನ್ನೇ ಹವ್ಯಾಸವಾಗಿಸಿಕೊಂಡಿದ್ದಾರೆ. 26 ಬಾರಿ ಎವರೆಸ್ಟ್ ಶಿಖರ ಏರಿದ ಸಾಹಸ ವ್ಯಕ್ತಿತ್ವ ಅವರದು. ಮೌಂಟ್ ಗಾಡ್ವಿನ್-ಆಸ್ಟೆನ್ (ಕೆ 2), ಮೌಂಟ್ ಲೊಟ್ಸೆ, ಮೌಂಟ್ ಮನಸ್ಲು ಮತ್ತು ಮೌಂಟ್ ಚೋ ಓಯುನ್ನು ಏರಿದ ಹೆಗ್ಗಳಿಕೆ ಅವರಿಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.