ಕೊಲೊಂಬೊ, ಮೇ 10 (DaijiworldNews/MS): ಶ್ರೀಲಂಕಾ ರಾಜಧಾನಿ ಕೊಲೊಂಬೊ ನಗರದಲ್ಲಿ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಾಳಿದ ಹಿನ್ನಲೆ ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಇಂದು ಬೆಳಿಗ್ಗೆ ಕೊಲಂಬೊದಲ್ಲಿನ ಅವರ ಅಧಿಕೃತ ನಿವಾಸದಿಂದ ಭಾರಿ ಶಸ್ತ್ರಸಜ್ಜಿತ ಪಡೆಗಳು ರಕ್ಷಿಸಿ ಸ್ಥಳಾಂತರಿಸಿವೆ.
ಸೋಮವಾರ, ಮಹಿಂದಾ ರಾಜಪಕ್ಸೆ ಅವರ "ಟೆಂಪಲ್ ಟ್ರೀಸ್ "ನಿವಾಸಕ್ಕೆ ಬಲವಂತವಾಗಿ ನುಗ್ಗಿದ ಪ್ರತಿಭಟನಾಕಾರರು ನಂತರ ರಾಜಪಕ್ಸೆ ಅವರ ಕುಟುಂಬಸ್ಥರು ಇರುವ ಎರಡು ಅಂತಸ್ತಿನ ಮುಖ್ಯ ಕಟ್ಟಡಕ್ಕೆ ನುಗ್ಗಲು ಪ್ರಯತ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮುಂಜಾನೆ ಕಾರ್ಯಾಚರಣೆಯ ನಂತರ, ಮಹಿಂದ ರಾಜಪಕ್ಸ ಮತ್ತು ಅವರ ಕುಟುಂಬವನ್ನು ಸೇನೆ ಸುರಕ್ಷಿತವಾಗಿ ಸ್ಥಳಾಂತರಿಸಿದೆ ಎಂದು ಉನ್ನತ ಭದ್ರತಾ ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅವರ ಮನೆಯ ಕಂಪೌಂಡ್ ಮೇಲೆ ಕನಿಷ್ಠ 10 ಪೆಟ್ರೋಲ್ ಬಾಂಬ್ಗಳನ್ನು ಎಸೆಯಲಾಗಿದೆ.
ಹಿಂಸಾತ್ಮಕ ಪ್ರತಿಭಟನೆಯ ನಂತರ ರಾಜಪಕ್ಸೆಯವರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು, ಹಿಂಸಾಚಾರದಲ್ಲಿ ಶಾಸಕರು ಸೇರಿದಂತೆ ಇದುವರೆಗೆ 8 ಮಂದಿ ಮೃತಪಟ್ಟಿದ್ದು, ಸುಮಾರು 200 ಜನರು ಗಾಯಗೊಂಡಿದ್ದಾರೆ.
ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ತ್ಯಜಿಸುವ ಕೆಲವೇ ಗಂಟೆಗಳ ಮೊದಲು ನಡೆದ ಘಟನೆಗೆ ಪ್ರತೀಕಾರವಾಗಿ ಈ ದಾಳಿಗಳು ನಡೆದಿವೆ ಎನ್ನಲಾಗಿದೆ.