ಬೀಜಿಂಗ್, ಮೇ 12 (DaijiworldNews/DB): ರನ್ವೇಯಿಂದ ಟೇಕ್ ಆಫ್ ಆಗುವ ವೇಳೆ ಟಿಬೆಟ್ ಏರ್ ಲೈನ್ಸ್ ವಿಮಾನವೊಂದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಚೀನಾದ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ವಿಮಾನದಲ್ಲಿ ಒಟ್ಟು113 ಮಂದಿ ಪ್ರಯಾಣಿಕರು ಮತ್ತು ಒಂಬತ್ತು ಸಿಬಂದಿಗಳಿದ್ದರು. ಚೀನಾದ ನೈರುತ್ಯ ನಗರ ಚಾಂಗ್ ಕ್ವಿಂಗ್ನಿಂದ ಟಿಬೆಟ್ ನ ನೈಂಗ್ ಚಿಗೆ ತೆರಳಲು ಟೇಕ್ ಆಫ್ ಆಗಿತ್ತು. ಅಷ್ಟರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಎಲ್ಲಾ ಸಿಬಂದಿ ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸುಮಾರು 40 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಇವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇನ್ನು ವಿಮಾನ ಟೇಕ್ ಆಫ್ ಆಗುವ ಸಂದರ್ಭದಲ್ಲಿ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಭಯಭೀತ ಪ್ರಯಾಣಿಕರು ರನ್ವೇಯಿಂದ ಹೊರಕ್ಕೆ ಓಡಿ ಬರುತ್ತಿರುವ ದೃಶ್ಯ ಮನಕಲಕುವಂತಿದೆ.