ಸಿಂಗಾಪುರ, ಮೇ 12 (DaijiworldNews/MS): ಕುಡಿದ ಅಮಲಿನಲ್ಲಿ ಅಪಘಾತಕ್ಕೀಡಾದಾಗ , ಟ್ರಾಫಿಕ್ ಪೊಲೀಸರಿಗೆ ಲಂಚ ನೀಡಲು ಯತ್ನಿಸಿದ್ದಕ್ಕಾಗಿ ಭಾರತೀಯ ಮೂಲದ ಮಲೇಷಿಯಾದ ವ್ಯಕ್ತಿಯೊಬ್ಬನಿಗೆ ನಾಲ್ಕು ವಾರಗಳ ಜೈಲು ಶಿಕ್ಷೆ ಮತ್ತು 5,000 ಸಿಂಗಾಪುರ್ ಡಾಲರ್ (ಎಸ್ಜಿಡಿ) ದಂಡ ವಿಧಿಸಲಾಗಿದೆ.
ಶಿಕ್ಷೆಗೊಳಗಾದ ವ್ಯಕ್ತಿಯನ್ನು ಮಲೇಷಿಯಾದ ಪ್ರಜೆಯಾಗಿರುವ ಭಾರತ ಮೂಲದ ಕೃಷ್ಣರಾವ್ ನರಿಸಾಮ ನಾಯ್ಡೂ (34) ಎಂದು ಗುರುತಿಸಲಾಗಿದೆ. ಕೃಷ್ಣರಾವ್ 2021 ನವೆಂಬರ್ 21 ರಂದು ತಮ್ಮ ದ್ವಿಚಕ್ರ ವಾಹನದಲ್ಲಿ ಪಯೋನೀರ್ ರಸ್ತೆಯ ಬಳಿ ಅಪಘಾತಕ್ಕೀಡಾಗಿದ್ದರು . ಈ ಸಂದರ್ಭ ಪೊಲೀಸ್ ಅಧಿಕಾರಿಗಳಾದ ಸಾರ್ಜೆಂಟ್ ಮುಹಮ್ಮದ್ ಅಜರ್ ಮತ್ತು ಸಾರ್ಜೆಂಟ್ ಫಿರ್ಹಾನ್ ಅಬ್ದುಲ್ ರಶೀದ್ ಅವರು ಘಟನಾ ಸ್ಥಳಕ್ಕೆ ಆಗಮಿಸಿದಾಗ, ಕೃಷ್ಣರಾವ್ ಅವರು ಆಲ್ಕೋಹಾಲ್ ಸೇವಿಸಿರುವುದನ್ನು ಒಪ್ಪಿ SGD 50 ನೋಟನ್ನು ಲಂಚವಾಗಿ ನೀಡಲು ಮುಂದೆ ಬಂದರು. ಈ ವೇಳೆ ಬ್ರೀತ್ ಅನಲೈಸರ್ ಪರೀಕ್ಷೆಯಲ್ಲಿ ಆಲ್ಕೋಹಾಲ್ ಸೇವಿಸಿರುವುದು ಸ್ಪಷ್ಟವಾಗಿತ್ತು.
ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ಆರೋಪ ಜೊತೆಗೆ, ಕುಡಿದು ವಾಹನ ಚಲಾಯಿಸುವುದು ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಕ್ಕಾಗಿ ಆತನನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಯಿತು.
"ಸಿಂಗಾಪುರ ಭ್ರಷ್ಟಾಚಾರದ ಕಡೆಗೆ ಕಟ್ಟುನಿಟ್ಟಾದ ಶೂನ್ಯ-ಸಹಿಷ್ಣು ವಿಧಾನವನ್ನು ಅಳವಡಿಸಿಕೊಂಡಿದೆ" ಎಂದು ಭ್ರಷ್ಟ ಪ್ರಕರಣದ ತನಿಖಾ ಬ್ಯೂರೋ (ಸಿಪಿಐಬಿ) ಹೇಳಿದೆ.
ಭ್ರಷ್ಟಾಚಾರದ ಅಪರಾಧಕ್ಕೆ ಶಿಕ್ಷೆಗೊಳಗಾದ ಯಾರಾದರೂ SGD 100,000 ವರೆಗೆ ದಂಡ ವಿಧಿಸಬಹುದು, ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು.