ಕೀವ್ ,ಮೇ 13 (DaijiworldNews/MS): 'ನಾವು ಒಂದು ಒಪ್ಪಂದಕ್ಕೆ ಬರಲೇಬೇಕಾಗಿದ್ದು ಆದರೆ ಅದು ಯಾವುದೇ ಅಂತಿಮ ಷರತ್ತುಗಳಿಗೆ ಒಳಪಟ್ಟಿರಬಾರದು ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.
ದಕ್ಷಿಣ ಉಕ್ರೇನ್ನ ಕ್ರಿಮಿಯಾವನ್ನು 2014ರಲ್ಲಿ ರಷ್ಯಾ ಸ್ವಾಧೀನಪಡಿಸಿಕೊಂಡಿತ್ತು. ಕ್ರಿಮಿಯಾವನ್ನು ಯಾವುದೇ ಕಾರಣಕ್ಕೂ ರಷ್ಯಾದ ಭಾಗವೆಂದು ಒಪ್ಪಿಕೊಳ್ಳುವುದಿಲ್ಲ ಎಂದು ಇಟಲಿಯ ಸರ್ಕಾರಿ ಸ್ವಾಮ್ಯದ ‘ಆರ್ಎಐ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಕ್ರಿಮಿಯಾ ಸ್ವಾಯತ್ತತೆ ಹೊಂದಿದೆ. ಅದಕ್ಕೆ ಅದರದ್ದೇ ಆದ ಸಂಸತ್ತಿದೆ. ಆದರೆ ಉಕ್ರೇನ್ನ ಒಳಗಿದೆ ಎಂದು ಅವರು ತಿಳಿಸಿದ್ದಾರೆ.
'ನಮ್ಮ ಭೂಭಾಗವನ್ನು ಬೆಲೆ ತೆತ್ತು ಪುಟಿನ್ರನ್ನು ರಕ್ಷಿಸುವುದು ನಮಗೆ ಬೇಕಿಲ್ಲ. ಅದು ಅನ್ಯಾಯವಾಗುತ್ತದೆ. ರಷ್ಯಾದ ಸೇನೆಯು ನಮ್ಮ ಭೂಮಿಯನ್ನು ತೊರೆಯಬೇಕೆಂದು ನಾವು ಬಯಸುತ್ತೇವೆ, ನಾವು ರಷ್ಯಾದ ನೆಲದಲ್ಲಿಲ್ಲ' ಎಂದು ಇದೇ ವೇಳೆ ಹೇಳಿದ್ದಾರೆ.
ರಷ್ಯಾಕ್ಕೆ ಇನ್ನು ಹಲವು ಅಧ್ಯಕ್ಷರು ಮತ್ತು ಹಲವು ಮುಂದಿನ ತಲೆಮಾರುಗಳು ಬರಬೇಕಾಗಿದೆ . ಹೀಗಾಗಿ ನಾನು ಉಕ್ರೇನ್ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ರಷ್ಯಾ ನಮ್ಮ ನೆರೆಯ ದೇಶ. ರಷ್ಯಾದ ತನ್ನ ಭವಿಷ್ಯದ ಬಗ್ಗೆ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.