ಲುಂಬಿನಿ, ಮೇ 16 (DaijiworldNews/DB): ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುದ್ಧನ ಜನ್ಮ ಸ್ಥಳವಾದ ಲುಂಬಿನಿಗೆ ಭೇಟಿ ನೀಡಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಮಾರಂಭದಲ್ಲಿ ಪಾಲ್ಗೊಂಡರು.
ಮೋದಿ ಅವರೊಂದಿಗೆ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಸಹ ಇದ್ದರು. ದೆಹಲಿ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟಕ್ಕೆ ಸೇರಿದ ಜಾಗದಲ್ಲಿ ಶಂಕುಸ್ಥಾಪನೆ ನೆರವೇರಿತು. ಕಾರ್ಯಕ್ರಮಕ್ಕೂ ಮುನ್ನ ಗುರು ಪೂರ್ಣಿಮೆ ಅಂಗವಾಗಿ ಪ್ರಧಾನಿ ಮೋದಿ ಮತ್ತು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ದಂಪತಿ ಮಾಯಾ ದೇವಿ ದೇವಾಲಯದ ಆವರಣದಲ್ಲಿರುವ ಬುದ್ಧನ ಜನ್ಮದ ಗುರುತು ಕಲ್ಲಿಗೆ ಗೌರವ ಸಲ್ಲಿಸಿ, ಪೂಜಾವಿಧಿಗಳಲ್ಲಿ ಪಾಲ್ಗೊಂಡರು.
ಬಳಿಕ ದೇವಾಲಯದ ಬಳಿಯಿರುವ ಅಶೋಕ ಸ್ತಂಭದ ಸನಿಹ ಇಬ್ಬರೂ ನಾಯಕರು ದೀಪ ಬೆಳಗಿಸಿದರು. ಆನಂತರ ಲುಂಬಿನಿ ವನಕ್ಕೆ ಪ್ರಧಾನಿ ಮೋದಿ ಅವರು 2014ರಲ್ಲಿ ಕೊಡುಗೆ ನೀಡಿದ್ದ ಬೋಧಿ ವೃಕ್ಷದ ಸಸಿಗೆ ನೀರೆರೆಯುವ ಕಾರ್ಯ ಜರಗಿತು.