ಕರಾಚಿ, ಮೇ 17 (DaijiworldNews/MS): ಜನನಿಬಿಡ ಪ್ರದೇಶವಾದ ಕರಾಚಿ ಮಾರುಕಟ್ಟೆಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿ 11 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮ ಡಾನ್ ವರದಿ ಮಾಡಿದೆ.
ರಾತ್ರಿ 9:25 ರ ಸುಮಾರಿಗೆ ನ್ಯೂ ಮೆಮನ್ ಮಸೀದಿ ಬಳಿಯ ಬಾಂಬೆ ಬಜಾರ್ನಲ್ಲಿ ಸುಧಾರಿತ ಪ್ರಬಲ ಸ್ಫೋಟಕ ಸಾಧನದಿಂದಾಗಿ ಸ್ಫೋಟ ಸಂಭವಿಸಿದೆ ಎಂದು ಗಾಯಾಳುಗಳು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆ ನಡೆದಾಗ ಖಾರದರ್ ಪೊಲೀಸ್ ಠಾಣೆಯ ವ್ಯಾನ್ ವೊಂದು ದಿನನಿತ್ಯದ ಗಸ್ತಿನಲ್ಲಿದ್ದು, ಸ್ಫೋಟದ ಪರಿಣಾಮ ಪೊಲೀಸ್ ವ್ಯಾನ್ ಹಲವು ಮೋಟಾರ್ಬೈಕ್, ರಿಕ್ಷಾ ಗಳಿಗೆ ಹಾನಿಯಾಗಿದ್ದು , ಹತ್ತಿರದ ಕಟ್ಟಡಗಳ ಕಿಟಕಿಗಳ ಗಾಜು ಒಡೆದು ಹೋಗಿದೆ ಎಂದು ವರದಿಯಾಗಿದೆ.
ಘಟನೆ ಬಳಿಕ ಆಂಬ್ಯುಲೆನ್ಸ್ಗಳು ಸಹಾಯದಿಂದ ಹನ್ನೆರಡು ಮಂದಿ ಗಾಯಗೊಂಡವರನ್ನು ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಗಾಯಾಳು ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಅಲ್ಲಿ ವೈದ್ಯರು ಘೋಷಿಸಿದ್ದಾರೆ. ಉಳಿದ 11 ಮಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.
ಮೂರು ದಿನಗಳಲ್ಲಿ ನಗರದಲ್ಲಿ ನಡೆದ ಎರಡನೇ ಸ್ಫೋಟ ಇದಾಗಿದೆ. ಕಳೆದ ಗುರುವಾರ ಸದ್ದಾರ್ನ ವಾಣಿಜ್ಯ ಪ್ರದೇಶದಲ್ಲಿ ನಡೆದ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದರು ಮತ್ತು 13 ಮಂದಿ ಗಾಯಗೊಂಡಿದ್ದರು.