ಕೊಲಂಬೊ, ಮೇ 17 (DaijiworldNews/HR): ಪ್ರಸ್ತುತ ಶ್ರೀ ಲಂಕಾದ ಆರ್ಥಿಕತೆಯ ಸ್ಥಿತಿ ಅನಿಶ್ಚಿತವಾಗಿದ್ದು, ಮುಕ್ತ ಮಾರುಕಟ್ಟೆಯ ಮೂಲಕ ಡಾಲರ್ ಸಂಗ್ರಹಿಸಲು ಯತ್ನಿಸುತ್ತಿದ್ದೇವೆ ಎಂದು ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.
ಈ ಕುರಿತು ದೂರದರ್ಶನದಲ್ಲಿ ಭಾಷಣದಲ್ಲಿ ದೇಶದ ಜನರಿಗೆ ಮಾಹಿತಿ ನೀಡಿರುವ ಅವರು, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗದೇ, ಹೊಸದಾಗಿ ನಗದು ಮುದ್ರಿಸಲು ನಿರ್ಧರಿಸಿದೆ. ಇದರ ಜೊತೆಗೆ ಸರ್ಕಾರಿ ಸ್ವಾಮ್ಯದಲ್ಲಿರುವ ವೈಮಾನಿಕ ಸಂಸ್ಥೆಯನ್ನು ಮಾರಾಟ ಮಾಡುವ ಪ್ರಸ್ತಾವವನ್ನೂ ಗಂಭೀರವಾಗಿ ಪರಿಗಣಿಸಿದೆ ಎಂದರು.
ಇನ್ನು ಕಳೆದ ಮಾರ್ಚ್ಗೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ವಿಮಾನಯಾನ ಸಂಸ್ಥೆಯು 45 ಶತಕೋಟಿ ಶ್ರೀಲಂಕಾ ರೂಪಾಯಿಗಳಷ್ಟು ನಷ್ಟ ಅನುಭವಿಸಿದೆ. ಒಮ್ಮೆಯೂ ವಿಮಾನದಲ್ಲಿ ಹೆಜ್ಜೆ ಇರಿಸದ ದೇಶದ ಬಡ ಜನರು ಈ ನಷ್ಟ ಭರಿಸಬೇಕು ಎನ್ನುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗಾಗಿ ಸಂಸ್ಥೆಯ ಖಾಸಗೀಕರಣದ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ಮೂರು ಹಡಗುಗಳನ್ನು ತರಿಸಲು ಮುಕ್ತ ಮಾರುಕಟ್ಟೆಯ ಮೂಲಕ ಡಾಲರ್ ಸಂಗ್ರಹಿಸಲು ಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.