ಕಬೂಲ್, ಮೇ 18 (DaijiworldNews/MS): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಬಂದಾಗಿನಿಂದಲೂ ಚಿತ್ರವಿಚಿತ್ರ ಬೆಳವಣಿಗೆಗಳು ಕಂಡುಬರುತ್ತಿದ್ದು, ಇದೀಗ ಮಾನವ ಹಕ್ಕುಗಳ ಆಯೋಗವನ್ನೇ ರದ್ದು ಮಾಡಿದೆ.
ತನ್ನ ದೇಶಕ್ಕೆ ಸ್ವತಂತ್ರ ಮಾನವ ಹಕ್ಕುಗಳ ಆಯೋಗದ ಅಗತ್ಯವಿಲ್ಲ ಎಂದು ಪರಿಗಣಿಸಿ ಅದನ್ನು ರದ್ದು ಮಾಡಲಾಗಿದೆ ಎಂದು ತಾಲಿಬಾನ್ ಆಡಳಿತದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
"ಮಾನವ ಹಕ್ಕುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳಲು ನಾವು ನ್ಯಾಯಾಂಗದೊಂದಿಗೆ ಸಂಬಂಧ ಹೊಂದಿರುವ ಇತರ ಕೆಲವು ಸಂಸ್ಥೆಗಳನ್ನು ಹೊಂದಿದ್ದೇವೆ, ಆದರೆ ಭವಿಷ್ಯದಲ್ಲಿ ಅಗತ್ಯವಿದ್ದರೆ ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಬಹುದು" ಎಂದು ತಾಲಿಬಾನ್ ಸರ್ಕಾರದ ಉಪ ವಕ್ತಾರ ಇನಾಮುಲ್ಲಾ ಸಮಂಗನಿ ಹೇಳಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರದ ಹಿಡಿದು ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ತಾಲಿಬಾನ್, ಚುನಾವಣಾ ಆಯೋಗ ಮತ್ತು ಮಹಿಳಾ ಸಚಿವಾಲಯ ಸೇರಿದಂತೆ ಅಫ್ಗನ್ನರ ಸ್ವಾತಂತ್ರ್ಯವನ್ನು ರಕ್ಷಿಸುತ್ತಿದ್ದ ಹಲವು ಸಂಸ್ಥೆಗಳನ್ನು ರದ್ದು ಮಾಡಿದೆ. ಇತ್ತೀಚೆಗಷ್ಟೇ ಮಹಿಳಾ ಶಿಕ್ಷಣ, ಮಹಿಳಾ ಉದ್ಯೋಗಿಗಳಿಗೆ ನಿಷೇಧ ಮತ್ತು ಮಹಿಳೆಯರ ಚಾಲನಾ ಪರವಾನಗಿ ರದ್ದು ಸೇರಿದಂತೆ ಹಲವು ವಿವಾಧಿತ ಕ್ರಮಗಳನ್ನು ತಾಲಿಬಾನ್ ಸರ್ಕಾರ ಕೈಗೊಂಡಿದೆ