ಕೆನಡಾ, ಮೇ 20 (DaijiworldNews/DB): ಕೆನಡಾದಲ್ಲಿ ಸಂಸದರಾಗಿರುವ ತುಮಕೂರಿನ ಚಂದ್ರ ಆರ್ಯ ಕೆನಡಾ ಸಂಸತ್ತಿನಲ್ಲಿ ಕನ್ನಡ ಮಾತಾಡುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಕನ್ನಡ ಪ್ರೇಮಕ್ಕೆ ಸಂಸತ್ತಿನಲ್ಲಿ ದೊಡ್ಡ ಕರತಾಡನವೇ ಕೇಳಿ ಬಂದಿದೆ.
ಕೆನಡಾದಲ್ಲಿ ನೆಲೆಸಿರುವ ತುಮಕೂರಿನ ಸಿರಾ ತಾಲೂಕಿನ ದ್ವಾರಾಳು ಗ್ರಾಮದಚಂದ್ರ ಆರ್ಯ, ನಾನು ನನ್ನ ಮಾತೃಭಾಷೆಯಲ್ಲಿ ಮಾತನಾಡುತ್ತೇನೆ ಎಂದು ಸಭಾಪತಿಗಳನ್ನು ಮನವಿ ಮಾಡಿಕೊಂಡಾಗ ಸಭಾಪತಿಗಳು ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಸಂತಸಗೊಂಡ ಅವರು ಕನ್ನಡದಲ್ಲೇ ಮಾತು ಆರಂಭಿಸಿದರು.
ಮಾನ್ಯ ಸಭಾಪತಿ, ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ವ್ಯಕ್ತಿಯೊಬ್ಬ ಕೆನಡಾ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಕನ್ನಡದಲ್ಲಿ ಮಾತನಾಡುತ್ತಿರುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಅವರು ಮಾತು ಆರಂಭಿಸಿದರು.
ಕೆನಡಾದ ಕನ್ನಡಿಗರು 2018ರಲ್ಲಿಇದೇ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಬರೆದು ನಟಸಾರ್ವಭೌಮ ಡಾ. ರಾಜ್ಕುಮಾರ್ ಹಾಡಿರುವ ಭಾವಗೀತೆಯ ಕೆಲವು ಸಾಲುಗಳೊಂದಿಗೆ ಮಾತು ಮುಗಿಸುತ್ತಿದ್ದೇನೆ ಎಂದವರು ಕುವೆಂಪು ವಿರಚಿತ ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಸಾಲುಗಳೊಂದಿಗೆ ತಮ್ಮ ಮಾತು ಕೊನೆಗೊಳಿಸಿದರು. ಆರ್ಯ ಅವರ ಅಪ್ಪಟ ಕನ್ನಡ ಪ್ರೇಮಕ್ಕೆ ಕೆನಡಾ ಸಂಸತ್ತಿನಲ್ಲಿ ದೊಡ್ಡ ಕರತಾಡನವೇ ಕೇಳಿ ಬಂತು.
ಆರ್ಯ ತಾವು ಕನ್ನಡದಲ್ಲಿ ಮಾತನಾಡುತ್ತಿರುವ ವೀಡಿಯೋವನ್ನು ತಮ್ಮಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು, 2800 ಕ್ಕೂ ಹೆಚ್ಚು ಬಾರಿ ಈ ಟ್ವೀಟ್ ರೀಟ್ವೀಟ್ ಆಗಿದೆ. 13 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.