ಲಂಡನ್, ಮೇ 21(DaijiworldNews/DB): ಯುನೈಟೆಡ್ ಕಿಂಗ್ಡಂನ ಶ್ರೀಮಂತರ ಪಟ್ಟಿಯಲ್ಲಿ ಅಲ್ಲಿನ ವಿತ್ತ ಸಚಿವ, ಭಾರತ ಮೂಲದ ರಿಷಿ ಸುನಾಕ್ ಮತ್ತು ಅವರ ಪತ್ನಿ, ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಸ್ಥಾನ ಪಡೆದುಕೊಂಡಿದ್ದಾರೆ.
ಸಂಡೇ ಟೈಮ್ಸ್ ಸಂಸ್ಥೆಯು ಪ್ರತಿವರ್ಷಯುನೈಟೆಡ್ ಕಿಂಗ್ಡಂನ ಶ್ರೀಮಂತರ ಸಮೀಕ್ಷೆ ನಡೆಸುತ್ತದೆ. ಈ ವರ್ಷದ ಪಟ್ಟಿ ಶುಕ್ರವಾರ ಬಿಡುಗಡೆಗೊಂಡಿದೆ. ಅದರಲ್ಲಿ ಒಟ್ಟು 250 ಮಂದಿ ಶ್ರೀಮಂತರನ್ನು ಪಟ್ಟಿ ಮಾಡಲಾಗಿದ್ದು, ರಿಷಿ ಸುನಾಕ್ ಮತ್ತು ಅಕ್ಷತಾ ಮೂರ್ತಿಗೆ 222ನೇ ಸ್ಥಾನ ದೊರೆತಿದೆ. ಭಾರತೀಯ ಮೂಲದ ದಂಪತಿಯ ಒಟ್ಟು ಆಸ್ತಿ ಮೌಲ್ಯ 7,074 ಕೋಟಿ ರೂ. ಎಂದು ಸಂಸ್ಥೆ ತಿಳಿಸಿದೆ.
ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಇಂತಹ ಸಮೀಕ್ಷೆಯನ್ನು ಸಂಡೇ ಟೈಮ್ಸ್ ನಡೆಸುತ್ತಿದೆ. ಆದರೆ ಶ್ರೀಮಂತರ ಪಟ್ಟಿಯಲ್ಲಿ ರಾಜಕಾರಣಿಯೊಬ್ಬರು ಸ್ಥಾನ ಪಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ತಮ್ಮ ಪೋಷಕರ ಸಂಸ್ಥೆಯಾದ ಇನ್ಫೋಸಿಸ್ನಲ್ಲಿ ಶೇ.0.93 ಷೇರು ಹೊಂದಿರುವುದಾಗಿ ಅಕ್ಷತಾ ಕಳೆದ ವರ್ಷ ಘೋಷಿಸಿದ್ದರು. ಇದೇ ಕಾರಣದಿಂದಾಗಿ ಈ ಬಾರಿ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎನ್ನಲಾಗುತ್ತಿದೆ.
2.75 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಹೊಂದುವ ಮೂಲಕ ಹಿಂದುಜಾ ಸಂಸ್ಥೆಯ ಮುಖ್ಯಸ್ಥ ಗೋಪಿಚಂದ್ ಹಿಂದುಜಾ ಮತ್ತುಅವರ ಕುಟುಂಬ ಯು.ಕೆ. ಶ್ರೀಮಂತರ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಭಾರತ ಮೂಲದ ಡೇವಿಡ್ ಮತ್ತು ಸೈಮೆನ್ ರೂಬೆನ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂ ಹಲವು ಮಂದಿ ಭಾರತೀಯರು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.