ಇಸ್ಲಮಾಬಾದ್, ಮೇ 22 (DaijiworldNews/DB): ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿರುವ ನಿರ್ಧಾರಕ್ಕೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪಾಕ್ ಸರ್ಕಾರವು ಆರ್ಥಿಕತೆಯಲ್ಲಿ ತಲೆಯಿಲ್ಲದ ಕೋಳಿಯಂತೆ ಓಡುತ್ತಿದೆ ಎಂದು ಟೀಕಿಸಿದ್ದಾರೆ.
ಕ್ವಾಡ್ನ ಭಾಗವಾಗಿದ್ದರೂ ಭಾರತ ಸರ್ಕಾರವು ಅಮೆರಿಕಾದ ಒತ್ತಡದ ನಡುವೆಯೂ ಜನಸಾಮಾನ್ಯರ ಪರ ನಡೆದುಕೊಂಡಿದೆ. ಜನರಿಗೆ ಪರಿಹಾರ ನೀಡುವ ಸಲುವಾಗಿ ರಷ್ಯಾದ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸುವ ಮೂಲಕ ಜನಸಾಮಾನ್ಯರ ಪರವಾಗಿ ನಡೆದುಕೊಂಡಿದೆ ಎಂದವರು ಟ್ವೀಟ್ ಮಾಡಿ ಭಾರತದ ಕ್ರಮವನ್ನು ಶ್ಲಾಘಿಸಿದ್ದಾರೆ.
ಆದರೆ ಇದೇ ವೇಳೆ ಪಾಕಿಸ್ತಾನ್ ಮುಸ್ಲಿಂ ಲೀಗ್ ನೇತೃತ್ವದ ಪಾಕಿಸ್ತಾನ ಸರ್ಕಾರದ ಬಗ್ಗೆಯೂ ಅವರು ಬರೆದುಕೊಂಡಿದ್ದಾರೆ. ಸ್ವತಂತ್ರ ವಿದೇಶಾಂಗ ನೀತಿಯ ಸಹಕಾರದೊಂದಿಗೆ ಪಾಕ್ ಸರ್ಕಾರವೂ ಈ ಕಾರ್ಯ ಸಾಧನೆಗಾಗಿ ಕೆಲಸ ಮಾಡುತ್ತಿದೆ. ಆದರೆ ಪ್ರಸ್ತುತ ಪಾಕ್ ಸರ್ಕಾರವು ಆರ್ಥಿಕತೆ ವಿಚಾರದಲ್ಲಿ ತಲೆಯಿಲ್ಲದ ಕೋಳಿಯಂತೆ ಓಡುತ್ತಿದೆ ಎಂದು ಜರೆದಿದ್ದಾರೆ.