ಅಮೇರಿಕಾ, ಮೇ 27 (DaijiworldNews/HR): ಅಮೇರಿಕಾದ ಟೆಕ್ಸಾಸ್ನ ಶಾಲೆಯಲ್ಲಿ ಬುಧವಾರ ಯುವಕನೊಬ್ಬನ ಗುಂಡೇಟಿನಿಂದಾಗಿ 19 ಮಕ್ಕಳೊಂದಿಗೆ ಅದೆಷ್ಟೋ ಕನಸುಗಳೂ ಶ್ಮಶಾನ ಸೇರಿದ್ದು, ಒಬ್ಬಳು ಬಾಲಕಿ ರಕ್ತ ಹಚ್ಚಿ ಸತ್ತಂತೆ ನಟಿಸಿ ಬದುಕುಳಿದ ಘಟನೆ ನಡೆದಿದೆ.
ಸಾಫ್ಟ್ ಬಾಲ್ ಆಟಗಾರ್ತಿಯಾಗಿದ್ದ 4ನೇ ತರಗತಿಯ ಎಲಿಹಾನಾ ಕ್ರೂಜ್ ಟೊರ್ರೆಸ್(10) ಶೂಟೌಟ್ ನಡೆದ ದಿನ ಶಾಲೆಯಲ್ಲಿ ನಡೆಯಲಿದ್ದ ಸಾಫ್ಟ್ಬಾಲ್ ಅಂತಿಮ ಪಂದ್ಯದಲ್ಲಿ ಭಾಗವಹಿಸಲು ಸಿದ್ದವಾಗಿದ್ದು, ಆಟವಾಡುವ ಖುಷಿಯಲ್ಲೇ ಶಾಲೆಗೆ ತೆರಳಿದ್ದು ಈ ವೇಳೆ ಗುಂಡೇಟಿಗೆ ಬಲಿಯಾಗಿದ್ದಾಳೆ.
ಇನ್ನು ಆರೋಪಿ ಸಾಲ್ವ ಡೋರ್ ರಾಮೋಸ್(18) ತರಗತಿಯೊಳಗೆ ಬರುತ್ತಿದ್ದಂತೆಯೇ ಮಕ್ಕಳಿಗೆ ಬಂದೂಕು ತೋರಿಸಿ, ನೀವೆಲ್ಲ ಈಗ ಸಾಯಲಿದ್ದೀರಿ ಎಂದಿದ್ದಾನೆ. ತಕ್ಷಣ ಬಾಲಕಿ ಅಮೆರಿ ಜೋ ಗರ್ಜಾ(10) ತನ್ನ ಫೋನ್ ನಿಂದ ಪೊಲೀಸರ ಸಂಖ್ಯೆಯಾದ 911ಕ್ಕೆ ಕರೆ ಮಾಡಲು ಮುಂದಾಗಿದ್ದಾಳೆ. ಅದನ್ನು ಕಂಡೊಡನೆ ಸಾಲ್ವ ಆಕೆಯ ಮೇಲೆ ಗುಂಡು ಹಾರಿಸಿ, ಹತ್ಯೆಗೈದಿದ್ದಾನೆ.
ಶಾಲೆಯಲ್ಲಿ ಶೂಟೌಟ್ ನಡೆದ ದಿನವೇ ಮಕ್ಕಳ ಸಾಧನೆಯನ್ನು ಗುರುತಿಸಲು 'ಹಾನರ್ ರೋಲ್' ಕಾರ್ಯಕ್ರಮ ಇಟ್ಟುಕೊಳ್ಳಲಾಗಿದ್ದು, ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಅವರ ತಂದೆ ತಾಯಿಯ ಎದುರೇ ಪ್ರಶಸ್ತಿ ಪತ್ರ ಕೊಡಲಾಗಿತ್ತು. ಅದೇ ರೀತಿ ಕ್ಸೇವಿಯರ್ ಲೊಪೆಜ್(10)ಗೂ ಪ್ರಶಸ್ತಿ ಪತ್ರ ವಿತರಿಸಲಾಗಿತ್ತು. ಆದರೆ ಪ್ರಶಸ್ತಿ ತೆಗೆದುಕೊಂಡ ಲೊಪೆಜ್ ಕೂಡ ಗುಂಡೇಟಿಗೆ ಬಲಿಯಾಗಿದ್ದಾನೆ.