ನವದೆಹಲಿ, ಮೇ 27 (DaijiworldNews/DB): ಆಗ್ನೇಯ ಏಷ್ಯಾದ ಪೂರ್ವ ಟಿಮೋರ್ ಕರಾವಳಿಯಲ್ಲಿ ಶುಕ್ರವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುನಾಮಿ ಭೀತಿ ಎದುರಾಗಿದೆ.
ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ ಪೂರ್ವ ಟಿಮೋರ್ ಮತ್ತು ಇಂಡೋನೇಷ್ಯಾ ನಡುವೆ ವಿಭಜನೆಗೊಂಡಿರುವ ಟಿಮೋರ್ ದ್ವೀಪದ ಪೂರ್ವ ತುದಿಯಿಂದ 51.4 ಕಿಮೀ ಆಳದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಅಲ್ಲಿ ಭೂಕಂಪ ಸಂಭವಿಸಿದ ಕಾರಣ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುನಾಮಿ ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಪೂರ್ವ ಟಿಮೋರ್ ಪೆಸಿಫಿಕ್ ರಿಂಗ್ ಆಫ್ ಫೈರ್ನಲ್ಲಿ ನೆಲೆಸಿರುವ ಕಾರಣ ಈ ಪ್ರದೇಶದಲ್ಲಿ ಆಗಾಗ ಭೂಕಂಪ ಉಂಟಾಗುತ್ತಿದೆ. ಈ ಭಾಗದಲ್ಲಿ 1.3 ಮಿಲಿಯನ್ ಜನಸಂಖ್ಯೆಯಿದ್ದು, ಇದು ಆಗ್ನೇಯ ಏಷ್ಯಾದ ಚಿಕ್ಕ ರಾಷ್ಟ್ರವಾಗಿದೆ. ಸುನಾಮಿ ದೊಡ್ಡ ಮಟ್ಟದ ಪ್ರವಾಹವನ್ನು ಉಂಟು ಮಾಡುವ ಆತಂಕಗಳಿದ್ದರೆ ಮಾತ್ರ ಸುನಾಮಿ ಎಚ್ಚರಿಕೆಯನ್ನು ಮೊದಲೇ ನೀಡಲಾಗುತ್ತದೆ. ಹೀಗಾಗಿ ಪೂರ್ವ ಟಿಮೋರ್ ಕರಾವಳಿಯಲ್ಲಿ ಸಂಭವಿಸಿದ ಭೂಕಂಪದಿಂದ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುನಾಮಿ ಉಂಟಾಗುವ ಸಾಧ್ಯತೆಯನ್ನು ಇದೇ ಎಚ್ಚರಿಕೆ ಮೇರೆಗೆ ನೀಡಲಾಗಿದೆ ಎಂದು ವರದಿಯಾಗಿದೆ.