ವಾಷಿಂಗ್ಟನ್, ಮೇ 28 (DaijiworldNews/DB): ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿನಡೆದ ಶಾಲಾ ಮಕ್ಕಳ ಹತ್ಯಾಕಾಂಡದ ವೇಳೆ ಮಕ್ಕಳನ್ನು ರಕ್ಷಿಸಲು ಹೋಗಿ ಹತ್ಯೆಯಾದ ಶಿಕ್ಷಕಿಯ ಪತಿ ಇದೀಗ ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.
18 ವರ್ಷದ ಶೂಟರ್ ಸಾಲ್ವಡಾರ್ ರಾಮೋಸ್ ಎಂಬಾತ ಕಳೆದ ಬುಧವಾರ ಟೆಕ್ಸಾಸ್ ಪ್ರಾಥಮಿಕ ಶಾಲೆಗೆ ನುಗ್ಗಿ ಮಕ್ಕಳ ಹತ್ಯಾಕಾಂಡ ನಡೆಸಿದ್ದ. ಈ ವೇಳೆ ನಾಲ್ಕನೇ ತರಗತಿಯ ಶಿಕ್ಷಕಿ ಇರ್ಮಾ ಗಾರ್ಸಿಯಾ ತನ್ನ ವಿದ್ಯಾರ್ಥಿಗಳನ್ನು ರಕ್ಷಿಸುವ ವೇಳೆ ಯುವಕ ಶಿಕ್ಷಕಿಯನ್ನೂ ಹತ್ಯೆಗೈದಿದ್ದ. ಶಿಕ್ಷಕಿಯ ಸಾವಿನ ಬೆನ್ನಲ್ಲೇ ಆಕೆಯ ಪತಿ ಜೋ ಹೇದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಗೋ ಫಂಡ್ ಮಿ ಪೇಜ್ ತಿಳಿಸಿರುವುದಾಗಿ ವರದಿಯಾಗಿದೆ. ಇನ್ನು ಮೃತ ಶಿಕ್ಷಕಿ ಗಾರ್ಸಿಯಾ ಅವರ ಸೋದರಳಿಯ ಎಂದು ಹೇಳಿಕೊಂಡಿರುವ ಜಾನ್ ಮಾರ್ಟಿನೆಜ್ ಅವರೂ ಟ್ವೀಟ್ ಮಾಡಿ ಗಾರ್ಸಿಯಾ ಪತಿ ಜೋ ಗಾರ್ಸಿಯಾ ನಿಧನ ಹೊಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ದಂಪತಿಯು ನಾಲ್ಕು ಮಕ್ಕಳನ್ನು ಅಗಲಿದ್ದಾರೆ ಎಂದು ರಾಬ್ ಎಲಿಮೆಂಟರಿ ಶಾಲೆಯ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ. ಗಾರ್ಸಿಯಾರೊಂದಿಗೆ ಸಹ ಶಿಕ್ಷಕಿ ಇವಾ ಮಿರೆಲೆಸ್ ಅವರೂ ಗುಂಡಿನ ದಾಳಿಗೆ ಬಲಿಯಾಗಿದ್ದರು. ಘಟನೆಯಲ್ಲಿ ಶಾಲೆಯ 19 ಮಂದಿ ಮಕ್ಕಳು ಸಾವನ್ನಪ್ಪಿದ್ದರು.