ಜಕಾರ್ತ, ಮೇ 28 (DaijiworldNews/DB): ಇಂಡೊನೇಷ್ಯಾದ ಕರಾವಳಿ ಭಾಗದಲ್ಲಿ ಹಡಗೊಂದು ಸಮುದ್ರದ ಮಧ್ಯೆ ಪಲ್ಟಿಯಾಗಿದ್ದು, ಘಟನೆಯಲ್ಲಿ 26 ಮಂದಿ ನಾಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪ್ರತಿಕೂಲ ವಾತಾವರಣ ಮತ್ತು ಇಂಧನ ಖಾಲಿಯಾದ ಪರಿಣಾಮ ಹಡಗು ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆ ಗುರುವಾರವೇ ನಡೆದಿದ್ದು, ಶನಿವಾರ ರಕ್ಷಣಾ ಅಧಿಕಾರಿಗಳಿಗೆ ವಿಷಯ ಗೊತ್ತಾಗಿದೆ. ಹಡಗಿನಲ್ಲಿ ಒಟ್ಟು 43 ಮಂದಿ ಸಂಚರಿಸುತ್ತಿದ್ದರು. ಸುಲವೇಸಿ ಮತ್ತು ಬೊರ್ನಿಯೊ ದ್ವೀಪಗಳನ್ನು ಪ್ರತ್ಯೇಕಿಸುವ ಮಕಸ್ಸಾರ್ ಜಲಸಂಧಿಯಲ್ಲಿ ಹಡಗು ಮುಳುಗಿದೆ ಎನ್ನಲಾಗಿದೆ.
ಹಡಗು ಮುಳುಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಕೂಡಲೇ ಕಾರ್ಯಾಚರಣೆಗಿಳಿದ ರಕ್ಷಣಾ ಸಿಬಂದಿ ಎರಡು ಬೋಟ್ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿ 17 ಮಂದಿಯನ್ನು ರಕ್ಷಿಸಿದ್ದಾರೆ. ಆದರೆ 26 ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.