ಕಾಠ್ಮಂಡು, ಮೇ 29 (DaijiworldNews/HR): ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ನೇಪಾಳ ಏರ್ ಲೈನ್ ನ ವಿಮಾನವು ಪತನಗೊಂಡಿರುವ ಸ್ಥಳವನ್ನು ನೇಪಾಳ ಸೇನೆಯ ಹೆಲಿಕಾಪ್ಟರ್ ಪತ್ತೆ ಮಾಡಿರುವುದಾಗಿ ವರದಿಯಾಗಿದೆ.
ಈ ಕುರಿತು ಸೇನಾ ವಕ್ತಾರ ನಾರಾಯಣ ಸಿಲ್ವಾಲ್ ಮಾಹಿತಿ ನೀಡಿದ್ದು, ತಾರಾ ಏರ್ ವಿಮಾನವು ಮಾನಪತಿ ಹಿಮಾಲ್ ಭೂಕುಸಿತದ ಅಡಿಯಲ್ಲಿ ಲಾಮ್ಚೆ ನದಿಯಲ್ಲಿ ಪತನಗೊಂಡಿದೆ ಎಂದು ತಿಳಿಸಿದ್ದಾರೆ.
ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು ಪೋಖರಾದಿಂದ ಬೆಳಿಗ್ಗೆ 9:55 ಕ್ಕೆ ಹೊರಟಿದ್ದು,15 ನಿಮಿಷಗಳ ನಂತರ ನಿಯಂತ್ರಣ ಗೋಪುರದ ಸಂಪರ್ಕವನ್ನು ಕಳೆದುಕೊಂಡಿತು ಎಂದು ಏರ್ಲೈನ್ ವಕ್ತಾರರು ತಿಳಿಸಿದ್ದಾರೆ.
10 ಸೈನಿಕರು ಮತ್ತು ನಾಗರಿಕ ವಿಮಾನಯಾನ ಪ್ರಾಧಿಕಾರದ ಇಬ್ಬರು ಉದ್ಯೋಗಿಗಳನ್ನು ಹೊತ್ತ ನೇಪಾಳ ಸೇನೆಯ ಹೆಲಿಕಾಪ್ಟರ್ ಅಪಘಾತದ ಸಂಭವನೀಯ ಸ್ಥಳವಾದ ನಾರ್ಶಾಂಗ್ ಮಠದ ಬಳಿ ನದಿಯ ದಡದಲ್ಲಿ ಇಳಿದಿದ್ದು, ನೇಪಾಳ ಟೆಲಿಕಾಂ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ನೆಟ್ವರ್ಕ್ ಮೂಲಕ ವಿಮಾನದ ಕ್ಯಾಪ್ಟನ್ ಪ್ರಭಾಕರ್ ಘಿಮಿರೆ ಅವರ ಸೆಲ್ಫೋನ್ ಅನ್ನು ಪತ್ತೆಹಚ್ಚಿದ ನಂತರ ವಿಮಾನವನ್ನು ಪತ್ತೆ ಮಾಡಲಾಗಿದೆ.