ಕಠ್ಮಂಡು, ಮೇ 30 (DaijiworldNews/HR): ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ನೇಪಾಳದ ಪರ್ವತದ ಮೇಲೆ ಅಪ್ಪಳಿಸಿದ ವಿಮಾನದಿಂದ ಹದಿನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದು ಬಂದಿದೆ.
ಶೋಧ ಕಾರ್ಯಚರಣೆ ಮುಂದುವರಿದಿದ್ದು, ಇಲ್ಲಿಯವರೆಗೆ ಹದಿನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಕ್ತಾರ ದಿಯೋ ಚಂದ್ರ ಲಾಲ್ ಕರ್ನ್ ತಿಳಿಸಿದ್ದಾರೆ.
ಇನ್ನು ವಾಯುವ್ಯ ನೇಪಾಳದ ಮಸ್ಟಾಂಗ್ ಜಿಲ್ಲೆಯ ತಾಸಾಂಗ್ ನ ಸಾನೊ ಸ್ವಾರೆ ಭೀರ್ ಎಂಬಲ್ಲಿ 14,500 ಅಡಿ ಎತ್ತರದಲ್ಲಿ ವಿಮಾನ ಕಣ್ಮರೆಯಾದ ಸುಮಾರು 20 ಗಂಟೆಗಳ ನಂತರ ಅಪಘಾತದ ಸ್ಥಳ ಪತ್ತೆಯಾಗಿದೆ.
ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು ಪೋಖರಾದಿಂದ ಬೆಳಿಗ್ಗೆ 9:55 ಕ್ಕೆ ಹೊರಟಿದ್ದು,15 ನಿಮಿಷಗಳ ನಂತರ ನಿಯಂತ್ರಣ ಗೋಪುರದ ಸಂಪರ್ಕವನ್ನು ಕಳೆದುಕೊಂಡು ನಾಪತ್ತೆಯಾಗಿದ್ದು, ಆ ಬಳಿಕ ವಾಯುವ್ಯ ನೇಪಾಳದ ಮಸ್ಟಾಂಗ್ ಜಿಲ್ಲೆಯ ತಾಸಾಂಗ್ ನ ಸಾನೊ ಸ್ವಾರೆ ಭೀರ್ ಎಂಬಲ್ಲಿ ಪತ್ತೆಯಾಗಿದೆ.