ಮಾಸ್ಕೊ, 03 (DaijiworldNews/DB): ರಷ್ಯಾ ಯಾವತ್ತೂ ನಷ್ಟವನ್ನು ಬಯಸುವುದಿಲ್ಲ. ನಷ್ಟವನ್ನು ಮೈಗೆಳೆದುಕೊಂಡು ಇಂಧನ ಮಾರಾಟ ಮಾಡುವುದಕ್ಕೆ ನಾವು ಮುಂದಾಗುವುದಿಲ್ಲ ಎಂದು ರಷ್ಯಾ ಹೇಳಿದೆ.
ರಷ್ಯಾ ಆಡಳಿತ ಕಚೇರಿ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ವಿವಿಧ ಪ್ರದೇಶಗಳಲ್ಲಿ ತೈಲ ಬೇಡಿಕೆಯನ್ನಾಧರಿಸಿ ಸರಬರಾಜಿನ ಬಗ್ಗೆ ಹೊಸ ನಿರ್ದೇಶನಗಳನ್ನು ಹೊರಡಿಸಲಾಗುವುದು. ಬೇಡಿಕೆ ಕುಸಿದರೆ ಮತ್ತು ಹೆಚ್ಚಾದರೆ ಇಂತಹ ನಿರ್ದೇಶನಗಳು ಹೆಚ್ಚು ಅನುಕೂಲವಾಗಲಿದೆ. ನಷ್ಟವನ್ನು ಮೈಗೆಳೆದುಕೊಳ್ಳಲು ನಾವು ಸಿದ್ದರಿಲ್ಲ ಎಂದು ತಿಳಿಸಿದ್ದಾರೆ.
ಫೆಬ್ರವರಿ ತಿಂಗಳಾಂತ್ಯದಿಂದ ರಷ್ಯಾವು ಉಕ್ರೇನ್ ಮೇಲೆ ಆರಂಭಿಸಿರುವ ಯುದ್ದವು ಇನ್ನೂ ಮುಂದುವರಿಯುತ್ತಿದೆ. ರಷ್ಯಾದ ಈ ದಾಳಿಯನ್ನು ಖಂಡಿಸಿ ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳು ರಷ್ಯಾ ಮೇಲೆ ವಿವಿಧ ನಿರ್ಬಂಧಗಳನ್ನು ಹೇರಿವೆ. ಆದರೆ ರಷ್ಯಾದಿಂದ ಭಾರತಕ್ಕೆ ರಿಯಾಯಿತಿ ದರದಲ್ಲಿ ಇಂಧನ ಪೂರೈಕೆಯಾಗುತ್ತಿದೆ. ರಷ್ಯಾ ವಿರುದ್ದ ವಿಶ್ವಸಂಸ್ಥೆಯ ನಿರ್ಣಯಗಳಿಂದಲೂ ಭಾರತ ದೂರ ಉಳಿದಿತ್ತಲ್ಲದೆ, ಎರಡೂ ರಾಷ್ಟ್ರಗಳ ನಾಯಕರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿತ್ತು.