ಶ್ರೀಲಂಕಾ, ಜೂ. 04 (DaijiworldNews/DB): ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಗೆ ಭಾರತ ನೆರವಿನ ಹಸ್ತ ಚಾಚಿದೆ. 3.3 ಟನ್ ವೈದ್ಯಕೀಯ ಸವಲತ್ತುಗಳನ್ನು ನೆರೆ ರಾಷ್ಟ್ರಕ್ಕೆ ಭಾರತ ಒದಗಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿದೆ. ಇದರ ಪರಿಣಾಮ ಈಗಾಗಲೇ ಹಲವು ರೀತಿಯ ಸಮಸ್ಯೆಗಳನ್ನು ಶ್ರೀಲಂಕಾ ಎದುರಿಸಿದ್ದು, ಅಗತ್ಯ ವಸ್ತುಗಳ ಕೊರತೆಯೂ ಎದುರಾಗಿದೆ. ಅಗತ್ಯ ವಸ್ತುಗಳ ಅಲಭ್ಯತೆಯಿಂದಾಗಿ ಬೆಲೆ ಏರಿಕೆಯ ಬಿಸಿಯೂ ಅಲ್ಲಿ ತಟ್ಟಿದೆ. ಹೀಗಾಗಿ ನೆರೆಹೊರೆ ಮೊದಲು ಎಂಬ ಭಾರತದ ವಿದೇಶಾಂಗ ನೀತಿಗೆ ಅನುಸಾರವಾಗಿ ಭಾರತವು ನೆರೆ ರಾಷ್ಟ್ರ ಶ್ರೀಲಂಕಾಗೆ ಸಹಾಯ ಮಾಡಿದೆ. ಶ್ರೀಲಂಕಾದ ಸುವಾಸೇರಿಯಾ ಆಂಬ್ಯುಲೆನ್ಸ್ ಸೇವೆಗೆ ಸುಮಾರು 3.3ಟನ್ ಔಷಧಿ, ಉಪಕರಣಗಳನ್ನೊಳಗೊಂಡ ವೈದ್ಯಕೀಯ ಸವಲತ್ತನ್ನು ಭಾರತ ನೀಡಿದೆ. ಕೋಲಂಬೋದ ಭಾರತದ ಹೈಕಮಿಷನರ್ ಗೋಪಾಲ್ ಬಾಗ್ಲೆ ಅವರು ಭಾರತದ ನೆರವನ್ನು ಶ್ರೀಲಂಕಾಕ್ಕೆ ಹಸ್ತಾಂತರ ಮಾಡಿದ್ದಾರೆ.
ಕಳೆದ ಮಾರ್ಚ್ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೊಲಂಬೊದಲ್ಲಿರುವ ಸುವಾಸೇರಿಯಾ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾಗ ಅಲ್ಲಿ ವೈದ್ಯಕೀಯ ಸವಲತ್ತುಗಳ ಕೊರತೆ ಬಗ್ಗೆ ಅಧಿಕಾರಿಗಳು ಹೇಳಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ಸಚಿವರು, ನೆರೆ ರಾಷ್ಟ್ರಕ್ಕೆ ಸಹಾಯದ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಅಗತ್ಯತೆಗಳನ್ನು ಪೂರೈಸಲು ಭಾರತ ಸಹಾಯ ಹಸ್ತ ಚಾಚಿದೆ. ಭಾರತದ ನೌಕಾಸೇನೆಯ ಐಎನ್ಎಸ್ ಘರಿಯಲ್ ಮೂಲಕ ವೈದ್ಯಕೀಯ ಅಗತ್ಯ ಸೌಲಭ್ಯಗಳನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಡಲಾಗಿದೆ.