ಢಾಕಾ, ಜೂ. 05 (DaijiworldNews/DB): ಆಗ್ನೇಯ ಬಾಂಗ್ಲಾದೇಶದ ಕಂಟೈನರ್ ಡಿಪೋದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ದೇಶದ ಪ್ರಮುಖ ಬಂದರು ಚಿತ್ತಗಾಂಗ್ನ ಹೊರಗೆ 40 ಕಿಮೀ ದೂರದಲ್ಲಿರುವ ದೇಶೀಯ ಕಂಟೈನರ್ ಸಂಗ್ರಹಣಾ ಘಟಕದಲ್ಲಿ ಅವಘಡ ಸಂಭವಿಸಿದೆ. ಮಧ್ಯರಾತ್ರಿ ವೇಳೆಗೆ ಇಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ಲಭಿಸಿದ ತತ್ಕ್ಷಣ ಅಗ್ನಿಶಾಮಕ ಸಿಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ. ಅವಘಡದಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವ ವೇಳೆ ಅಗ್ನಿಶಾಮಕ ಸಿಬಂದಿಯೂ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ 20 ಮಂದಿ ಸ್ಥಿತಿ ಚಿಂತಾಜನಕವಾಗಿದೆ ಇವರೆಲ್ಲರೂ ಶೇ.60-90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ.ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಇದೆ ಎಂದು ವರದಿಯಾಗಿದೆ.
ಅವಘಡಕ್ಕೆ ಕಾರಣ ಗೊತ್ತಾಗಿಲ್ಲ. ಆದರೆ ಖಾಸಗಿ ಗೋದಾಮಿನಲ್ಲಿದ್ದ ಕೆಲವು ಕಂಟೈನರ್ಗಳಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಮತ್ತಿತರ ರಾಸಾಯನಿಕಗಳಿದ್ದವು. ಇದರಿಂದಲೂ ಬೆಂಕಿ ತಗಲುವ ಸಾಧ್ಯತೆ ಇದೆ ಎನ್ನಲಾಗಿದೆ. ಪೊಲೀಸ್ ಅಧಿಕಾರಿಗಳು ಅವಘಡದ ಕುರಿತಂತೆ ತನಿಖೆ ಆರಂಭಿಸಿದ್ದಾರೆ.