ನೈಜೀರಿಯಾ, ಜೂ 06 (DaijiworldNews/MS): ನೈಜೀರಿಯಾದ ಕ್ಯಾಥೊಲಿಕ್ ಚರ್ಚ್ ಒಂದರ ಮೇಲೆ ಭಾನುವಾರದ ಪ್ರಾರ್ಥನೆ ನಡೆಯುತ್ತಿರುವ ವೇಳೆ ಭಾನುವಾರ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ.
ನೈರುತ್ಯ ನೈಜೀರಿಯಾದ ಒಂಡೋ ರಾಜ್ಯದ ಒವೊ ನಗರದ ಸೈಂಟ್ ಫ್ರಾನ್ಸಿಸ್ ಕ್ಯಾಥೊಲಿಕ್ ಚರ್ಚ್ನಲ್ಲಿ ಭಾನುವಾರದ ಸಾಮೂಹಿಕ ಪ್ರಾರ್ಥನೆಗೆ ಸೇರಿದ್ದವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಇದ್ದಾರೆ ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯರ ಹೇಳಿಕೆ ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿರುವ ಶಂಕೆ ಕಂಡುಬಂದಿದೆ.
ಚರ್ಚ್ಗೆ ನುಗ್ಗಿದ ಶಸ್ತ್ರಸಜ್ಜಿತ ಬಂದೂಕುಧಾರಿಗಳು ಗುಂಡು ಹಾರಿಸಿದರ ಜೊತೆಗೆ ಸ್ಫೋಟಕಗಳನ್ನು ಬಳಸಿದ್ದಾರೆ. ಗುಂಡಿನ ದಾಳಿಗೆ ಕಾರಣ ತಿಳಿದುಬಂದಿಲ್ಲ. ಕೃತ್ಯದ ಹೊಣೆಯನ್ನು ಕೂಡ ಯಾರೂ ಹೊತ್ತುಕೊಂಡಿಲ್ಲ. ಹೀಗಾಗಿ ಪೊಲೀಸರು ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, ಅವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.