ದುಬೈ, ಜೂ. 07 (DaijiworldNews/DB): ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಗುಪ್ತಾ ಸೋದರರನ್ನು ಯುಎಇಯಲ್ಲಿನ ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೇಕಬ್ ಜುಮಾ ಅವರ ಆಡಳಿತದಲ್ಲಿ ಸಹೋದರರಾದ ರಾಜೇಶ್ ಗುಪ್ತಾ ಹಾಗೂ ಅತುಲ್ ಗುಪ್ತಾ ಅವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಹೀಗಾಗಿ ಅವರಿಗೆ ಇಂಟರ್ಪೋಲ್ ರೆಡ್ ನೋಟಿಸ್ಗಳನ್ನು ನೀಡಲಾಗಿತ್ತು ಎಂದು ದಕ್ಷಿಣ ಆಫ್ರಿಕಾ ತಿಳಿಸಿರುವುದಾಗಿ ವರದಿಯಾಗಿದೆ.
ದಕ್ಷಿಣ ಆಫ್ರಿಕಾದ ಪ್ಯಾರಾಸ್ಟಾಟಲ್ ಸಂಸ್ಥೆಗಳಿಂದ 2018ರಲ್ಲಿ ಗುಪ್ತಾ ಕುಟುಂಬವು ಶತಕೋಟಿ ರಾಂಡ್ಗಳನ್ನು ಲೂಟಿ ಮಾಡಿದ ಆರೋಪವಿತ್ತು. ಆ ಬಳಿಕ ಅವರು ದುಬೈಯಲ್ಲಿ ನೆಲೆಸಿದ್ದರು. ಅಲ್ಲದೆ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೇಕಬ್ ಜುಮಾ ಅವರೊಂದಿಗೆ ಸಹೋದರದ್ವಿಯರು ಉತ್ತಮ ಸಂಬಂಧ ಹೊಂದಿದ್ದು, ಅದನ್ನೇ ಆರ್ಥಿಕ ಲಾಭ ಪಡೆದುಕೊಳ್ಳಲು ಬಳಸಿದ್ದರು. ಅಲ್ಲದೆ, ಸಂಪುಟ ನೇಮಕಾತಿಗಳ ಮೇಲೆಯೂ ಪ್ರಭಾವ ಬೀರಲು ಈ ಸಂಬಂಧವನ್ನು ಬಳಸಿಕೊಂಡಿದ್ದರು ಎಂಬ ಬಲವಾದ ಆರೋಪವಿದೆ. ಆದರೆ ಇಬ್ಬರೂ ಈ ಆರೋಪವನ್ನು ನಿರಾಕರಣೆ ಮಾಡಿದ್ದರು ಎನ್ನಲಾಗಿದೆ. ಜುಬಾ ಪದಚ್ಯುತಿ ಬಳಿಕ 2018ರಲ್ಲಿ ಇಬ್ಬರೂ ದಕ್ಷಿಣ ಆಫ್ರಿಕಾ ತೊರೆದು ದುಬೈಯಲ್ಲಿ ನೆಲೆಸಿದ್ದರು.